ಜಾತಿ ಪರಿಗಣಿಸಿ ಅನರ್ಹರಿಗೆ ಆದ್ಯತೆ ನೀಡಬೇಡಿ: ಸಚಿವ ಜಿ.ಟಿ.ದೇವೇಗೌಡ

Update: 2019-07-12 12:18 GMT

ಬೆಂಗಳೂರು, ಜು.12: ಜಾತಿಯನ್ನು ಪರಿಗಣಿಸಿ ಅನರ್ಹರಿಗೆ ಆದ್ಯತೆ ತೋರುವ ಮೂಲಕ ವಿಶ್ವವಿದ್ಯಾನಿಲಯಕ್ಕೆ ಕಪ್ಪು ಚುಕ್ಕೆ ತರಬಾರದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಮಹಾರಾಣಿ ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಔದ್ಯೋಗಿಕ, ಕೌಶಲ್ಯಾಧಾರಿತ ಕಲಿಕೆಯಾಗಿ ಪದವಿ ಶಿಕ್ಷಣ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯದಲ್ಲಿ ಯಾವ ಕಾರಣಕ್ಕೂ ಜಾತಿಗಳಿಗೆ ಪ್ರಾಧಾನ್ಯತೆ ನೀಡಬಾರದು. ಬೆಂಬಲಿಗರು, ಅನರ್ಹರಿಗೆ ಮಣೆ ಹಾಕಬಾರದು ಎಂದು ಹೇಳಿದರು.

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯ ಮಲ್ಲಿಗೆ ಅರಳಿದಂತೆ ರಾಜ್ಯ, ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಸುವಾಸನೆ ಹರಡಬೇಕು. ಸರಕಾರಿ ವಿಶ್ವವಿದ್ಯಾನಿಲಯಗಳು ಯಾವುದೇ ಖಾಸಗಿ ವಿಶವ್ವಿದ್ಯಾನಿಲಯಗಿಂತ ಕಡಿಮೆಯೇನಲ್ಲ. ಪ್ರತಿಷ್ಠಿತ ಕೈಗಾರಿಕೆಗಳಿಂದ ತಜ್ಞರನ್ನು ವಿಶ್ವವಿದ್ಯಾನಿಲಯಕ್ಕೆ ಆಹ್ವಾನಿಸಿ, ಅವರಿಂದ ವಿದ್ಯಾರ್ಥಿಗಳಿಗೆ ಉಪನ್ಯಾಸ ಕೊಡಿಸಬೇಕು. ಆದರೆ ಸರಕಾರಿ ವಿಶ್ವವಿದ್ಯಾನಿಲಯದಲ್ಲಿ ಇಂತಹ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಮಾಜಿ ರಿಜಿಸ್ಟಾರ್ ಡಾ.ಆರ್.ಎಂ.ರಂಗನಾಥ್, ಬ್ಲೂ ಸೈ ಏಂಜೆಲ್ಸ್ ಅಧ್ಯಕ್ಷ ಡಾ.ರಮಸುಬ್ರಮಣ್ಯಂ, ಜಿಲ್ ಡಿಜಿಟಲ್ ಇಂಡಿಯಾ ಸಂಸ್ಥೆಯ ಡಿಜಿಟಲ್ ಬ್ರಾಂಡ್ ಅಂಬಾಸಿಡರ್ ಡಾ.ಹರಿಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News