ಐಎಂಎ ಬಹುಕೋಟಿ ವಂಚನೆ ಹಗರಣ: ಡಿಸಿ ವಿಜಯಶಂಕರ್ ಸೇರಿ ನಾಲ್ವರು ನ್ಯಾಯಾಂಗ ಬಂಧನಕ್ಕೆ

Update: 2019-07-12 15:22 GMT

ಬೆಂಗಳೂರು, ಜು.12: ಐ ಮಾನಿಟರಿ ಅಡ್ವೈಸರಿ(ಐಎಂಎ) ಬಹುಕೋಟಿ ವಂಚನೆಯ ಹಗರಣದ ಆರೋಪಿಗಳಾದ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್ ಮತ್ತು ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಅವರಿಗೆ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿರುವ ಸ್ಥಳೀಯ ನ್ಯಾಯಾಲಯ ಒಟ್ಟು ನಾಲ್ವರು ಆರೋಪಿಗಳನ್ನು ಇದೇ 25ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಸದ್ಯ ಎಸ್‌ಐಟಿ (ವಿಶೇಷ ತನಿಖಾ ತಂಡ) ವಶದಲ್ಲಿ ವಿಚಾರಣೆ ಎದುರಿಸಿರುವ ವಿಜಯ ಶಂಕರ್ ಮತ್ತು ನಾಗರಾಜ್ ಮಧ್ಯಂತರ ಜಾಮೀನು ಕೋರಿ ಶುಕ್ರವಾರ ಅರ್ಜಿ ಸಲ್ಲಿಸಿದರು. ಈ ಅರ್ಜಿಗಳನ್ನು ಸಿಟಿ ಸಿವಿಲ್ ಸೆಷನ್ಸ್ ಕೋರ್ಟ್‌ನ ಪ್ರಧಾನ ನ್ಯಾಯಾಧೀಶ ಶಿವಶಂಕರ ಬಿ.ಅಮರಣ್ಣವರ ವಿಚಾರಣೆ ನಡೆಸಿದರು.

ನಾಗರಾಜ್ ಪರ ಹಿರಿಯ ವಕೀಲರಾದ ಸಿ.ವಿ.ನಾಗೇಶ್ ಮತ್ತು ವಿಜಯಶಂಕರ್ ಪರ ವೈ.ಆರ್.ಸದಾಶಿವ ರೆಡ್ಡಿ ವಾದ ಮಂಡಿಸಿ, ಅರ್ಜಿದಾರರು ಕಾನೂನು ಪ್ರಕಾರವೇ ತಮ್ಮ ಕೆಲಸ ಮಾಡಿದ್ದಾರೆ. ಅವರು ಮುಗ್ಧರು ಮತ್ತು ಸರಕಾರಿ ನೌಕರರು. ಮಧ್ಯಂತರ ಜಾಮೀನು ನೀಡದೇ ಹೋದರೆ ಅವರ ಸಂವಿಧಾನದತ್ತ ಮೂಲಭೂತ ಹಕ್ಕು ಉಲ್ಲಂಘನೆ ಆಗುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದರು.

ಇದಕ್ಕೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಂ.ನಾರಾಯಣ ರೆಡ್ಡಿ, ಆರೋಪಿಗಳು ಕಾನೂನು ಪ್ರಕಾರ ನಡೆದುಕೊಂಡಿಲ್ಲ. ಮೇಲ್ನೋಟಕ್ಕೆ ಅವರ ವಿರುದ್ಧದ ಅಪರಾಧ ಸಾಬೀತಾಗುವಂತಿದೆ. ಇವರ ಅಪರಾಧಕ್ಕೆ ಜೀವಾವಧಿ ಶಿಕ್ಷೆ ನೀಡಬಹುದಾಗಿದೆ. ಹೀಗಾಗಿ, ಈ ಹಂತದಲ್ಲಿ ಜಾಮೀನು ನೀಡಿದರೆ ಪ್ರಕರಣದ ಸಮಗ್ರ ತನಿಖೆಗೆ ತೊಂದರೆ ಆಗುತ್ತದೆ ಎಂದು ಬಲವಾದ ಆಕ್ಷೇಪ ವ್ಯಕ್ತಪಡಿಸಿದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಜಯಶಂಕರ್, ನಾಗರಾಜ್ ಹಾಗೂ ಮಂಜುನಾಥ್ ಅವರ ಮಧ್ಯಂತರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದರು. ಅಂತೆಯೇ ಉಳಿದ ಆರೋಪಿಗಳಾದ ಬಿಬಿಎಂಪಿಯ ನಾಮನಿರ್ದೇಶಿತ ಸದಸ್ಯ ಸೈಯ್ಯದ್ ಮುಜಾಹಿದ್ ಮತ್ತು ದ್ವಿತೀಯ ದರ್ಜೆ ಸಹಾಯಕ ಎನ್.ಮಂಜುನಾಥ್ ಅವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.

ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರವಷ್ಟೇ(ಜು.11) ಎಸ್‌ಐಟಿ ಬಂಧಿಸಿದ್ದ, ಶಿವಾಜಿ ನಗರದ ಬೇಪಾರಿಯನ್ ಮಸೀದಿಯ ಮೌಲ್ವಿ (ಧರ್ಮಗುರು) ಹನೀಫ್ ಅಫ್ಸರ್ ಅಜೀಜಿ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಹನೀಫ್ ಅವರನ್ನು ಜು.18ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು.

ಪ್ರಕರಣದ ಪ್ರಮುಖ ಆರೋಪಿಗಳಾದ ವಿಜಯಶಂಕರ್ ಮತ್ತು ಎಲ್.ಸಿ.ನಾಗರಾಜ್ ಕ್ರಮವಾಗಿ 1.5 ಹಾಗೂ 4.5 ಕೋಟಿ ಲಂಚ ಪಡೆದಿರುವ ಆರೋಪ ಎದುರಿಸುತ್ತಿದ್ದಾರೆ.

ಮಧ್ಯಂತರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ ಎಂದು ಪ್ರಾಸಿಕ್ಯೂಷನ್ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಜು.18ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News