ಕ್ಸಿನ್‌ಜಿಯಾಂಗ್‌ನಲ್ಲಿ ಮುಸ್ಲಿಮರ ಬಂಧನ ಕೇಂದ್ರಗಳನ್ನು ಮುಚ್ಚಿ

Update: 2019-07-12 18:41 GMT

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಜು. 12: ಕ್ಸಿನ್‌ಜಿಯಾಂಗ್ ವಲಯದಲ್ಲಿರುವ ಮುಸ್ಲಿಮರ ಬಂಧನ ಶಿಬಿರಗಳು ಹಾಗೂ ಅವರ ವಿರುದ್ಧದ ಹಿಂಸಾಚಾರವನ್ನು ನಿಲ್ಲಿಸುವಂತೆ ಚೀನಾವನ್ನು ಒತ್ತಾಯಿಸಿ, ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಸ್ಥೆಯಲ್ಲಿರುವ 22 ದೇಶಗಳು ಈ ವಾರ ಜಂಟಿ ಹೇಳಿಕೆಯೊಂದನ್ನು ಹೊರಡಿಸಿವೆ ಎಂದು ಮಾನವಹಕ್ಕುಗಳ ಸಂಘಟನೆ ಹ್ಯೂಮನ್ ರೈಟ್ಸ್ ವಾಚ್ ಹೇಳಿದೆ.

ಈ ವಲಯಕ್ಕೆ ಅರ್ಥಪೂರ್ಣ ಪ್ರವೇಶ ಕಲ್ಪಿಸುವಲ್ಲಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್ ಮತ್ತು ವಿಶ್ವಸಂಸ್ಥೆಯ ಪರಿಣತರಿಗೆ ಸಹಕಾರ ನೀಡುವಂತೆಯೂ ಅಭೂತಪೂರ್ವ ಕ್ರಮವೊಂದರಲ್ಲಿ ಈ ದೇಶಗಳು ಚೀನಾವನ್ನು ಒತ್ತಾಯಿಸಿವೆ.

‘‘ಕ್ಸಿನ್‌ಜಿಯಾಂಗ್‌ನಲ್ಲಿ ಮುಸ್ಲಿಮರನ್ನು ಭಯಾನಕವಾಗಿ ನಡೆಸಿಕೊಳ್ಳುತ್ತಿರುವುದನ್ನು ನಿಲ್ಲಿಸುವಂತೆ 22 ದೇಶಗಳು ಚೀನಾಕ್ಕೆ ಕರೆ ನೀಡಿವೆ’’ ಎಂದು ಹ್ಯೂಮನ್ ರೈಟ್ಸ್ ವಾಚ್‌ನ ಜಿನೇವ ನಿರ್ದೇಶಕ ಜಾನ್ ಫಿಶರ್ ಹೇಳಿದ್ದಾರೆ. ‘‘ಈ ಹೇಳಿಕೆಯು ಕ್ಸಿನ್‌ಜಿಯಾಂಗ್‌ನ ಜನರಿಗೆ ಮಾತ್ರವಲ್ಲ, ಅತ್ಯಂತ ಶಕ್ತಿಶಾಲಿ ದೇಶಗಳ ಮೇಲೂ ಉತ್ತರದಾಯಿತ್ವ ಹೊರಿಸಬಲ್ಲ ವಿಶ್ವಸಂಸ್ಥೆಯ ಅತ್ಯುನ್ನತ ಮಾನವಹಕ್ಕು ಸಂಸ್ಥೆಯನ್ನು ಅವಲಂಬಿಸಿರುವ ಜಗತ್ತಿನಾದ್ಯಂತದ ಜನರಿಗೂ ಮಹತ್ವದ್ದಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕ್ಸಿನ್‌ಜಿಯಾಂಗ್ ವಲಯದಲ್ಲಿ ನಡೆಯುತ್ತಿರುವ ಜನರ ಸಾಮೂಹಿಕ ಬಂಧನ, ವ್ಯಾಪಕ ನಿಗಾ ಹಾಗೂ ಈ ವಲಯದಲ್ಲಿರುವ ಉಯಿಘರ್ ಮುಸ್ಲಿಮರು ಮತ್ತು ಇತರ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಇತರ ಹಿಂಸಾಚಾರಗಳ ವರದಿಗಳ ಬಗ್ಗೆ ಈ ದೇಶಗಳು ಕಳವಳ ವ್ಯಕ್ತಪಡಿಸಿವೆ.ವಿಶ್ವಸಂಸ್ಥೆ ಮತ್ತು ಇತರ ಸ್ವತಂತ್ರ ಅಂತರ್‌ರಾಷ್ಟ್ರೀಯ ವೀಕ್ಷಕರಿಗೆ ಕ್ಸಿನ್‌ಜಿಯಾಂಗ್ ಪ್ರದೇಶಕ್ಕೆ ಅರ್ಥಪೂರ್ಣ ಪ್ರವೇಶ ಕಲ್ಪಿಸುವಂತೆಯೂ ದೇಶಗಳು ಚೀನಾವನ್ನು ಒತ್ತಾಯಿಸಿವೆ.ಈ ವಿಷಯದಲ್ಲಿ ಮಾನವಹಕ್ಕುಗಳ ಮಂಡಳಿ (ಎಚ್‌ಆರ್‌ಸಿ)ಗೆ ನಿಯಮಿತವಾಗಿ ಮಾಹಿತಿ ನೀಡುವಂತೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್‌ರನ್ನು ಅವುಗಳು ಒತ್ತಾಯಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News