ವಿಂಡೀಸ್ ಪ್ರವಾಸಕ್ಕೆ ಕೊಹ್ಲಿ, ಬುಮ್ರಾಗೆ ವಿಶ್ರಾಂತಿ

Update: 2019-07-12 18:58 GMT

ಮುಂಬೈ, ಜು. 12: ಮುಂಬರುವ ವೆಸ್ಟ್‌ಇಂಡೀಸ್ ಪ್ರವಾಸ ಸರಣಿಗೆ ಭಾರತದ ಕ್ರಿಕೆಟ್ ತಂಡದ ಆಯ್ಕೆಗೆ ರಾಷ್ಟ್ರೀಯ ಆಯ್ಕೆ ಸಮಿತಿಯು ಜು.17 ಅಥವಾ 18ರಂದು ಸಭೆ ಸೇರಲಿದ್ದು, ನಾಯಕ ವಿರಾಟ್ ಕೊಹ್ಲಿ , ವೇಗದ ಬೌಲರ್‌ಗಳಾದ ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

 ಇದೇ ವೇಳೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಅವರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮುಂದುವರಿಯುತ್ತಾರೋ ಎನ್ನುವುದು ಸ್ಪಷ್ಟಗೊಂಡಿಲ್ಲ. ಟೆಸ್ಟ್ ಕ್ರಿಕೆಟ್‌ನಿಂದ ಯಾವುದೇ ಸುಳಿವು ನೀಡದೆ ನಿವೃತ್ತರಾಗಿದ್ದ ಧೋನಿ ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ನಿವೃತ್ತರಾಗುವ ಯಾವುದೇ ಸುಳಿವು ನೀಡಿಲ್ಲ. ಆದರೆ ದಿಢೀರನೆ ನಿವೃತ್ತಿ ಘೋಷಿಸುವುದು ಖಚಿತ ಎನ್ನಲಾಗುತ್ತಿದೆ.

38ರ ಹರೆಯದ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಸಂಕಷ್ಟಕ್ಕೆ ಸಿಲುಕಿದ್ದಾಗ ಆಲ್‌ರೌಂಡರ್ ರವೀಂದ್ರ ಜಡೇಜ ಜೊತೆಗೂಡಿ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದ್ದರು. ಅಗ್ರ ಸರದಿ ಬ್ಯಾಟಿಂಗ್ ವಿಫಲವಾಗಿದ್ದರೂ, ಮಧ್ಯಮ ಸರದಿಯಲ್ಲಿ ಮಾಜಿ ನಾಯಕ ಧೋನಿ (50) ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ (77) ಅರ್ಧಶತಕಗಳ ಕೊಡುಗೆ ನೀಡಿ ಹೋರಾಟ ನಡೆಸಿದ್ದರೂ ಅವರ ಹೋರಾಟ ಫಲ ನೀಡಲಿಲ್ಲ. ಭಾರತದ ಸೋಲನ್ನು ತಪ್ಪಿಸಲು ಅವರಿಂದ ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ನ್ಯೂಝಿಲ್ಯಾಂಡ್‌ನ ಮ್ಯಾಟ್ ಹೆನ್ರಿ(37ಕ್ಕೆ 3) ಮತ್ತು ಟ್ರೆಂಟ್ ಬೌಲ್ಟ್ (42ಕ್ಕೆ 2) ದಾಳಿಗೆ ಸಿಲುಕಿ 30.3 ಓವರ್‌ಗಳಲ್ಲಿ 92ಕ್ಕೆ 6 ವಿಕೆಟ್ ಕಳೆದುಕೊಂಡಿದ್ದ ಭಾರತದ ಬ್ಯಾಟಿಂಗ್‌ನ್ನು ಮುನ್ನಡೆಸಿದ ಮಹೇಂದ್ರ ಸಿಂಗ್ ಧೋನಿ ಮತ್ತು ರವೀಂದ್ರ ಜಡೇಜ ಗೆಲುವಿನ ಭರವಸೆ ಮೂಡಿಸಿದ್ದರು.

   ಜಡೇಜ ಮತ್ತು ಧೋನಿ 116 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಆಧರಿಸಿದ್ದರು. ಜಡೇಜ ಸ್ಫೋಟಕ ಬ್ಯಾಟಿಂಗ್‌ಗೆ ಒತ್ತು ನೀಡಿದ್ದರೆ ಧೋನಿ ಎಚ್ಚರಿಕೆಯಿಂದಲೇ ಆಡಿದ್ದರು. ಜಡೇಜಗೆ ಉತ್ತಮ ಬೆಂಬಲ ನೀಡಿದರು.ಭಾರತದ ಗೆಲುವಿಗೆ 32 ರನ್‌ಗಳ ಆವಶ್ಯಕತೆ ಇದ್ದಾಗ ಜಡೇಜ ಮತ್ತು ಧೋನಿ ಜೋಡಿಯನ್ನು ಬೌಲ್ಟ್ ಬೇರ್ಪಡಿಸುವಲ್ಲಿ ಯಶಸ್ವಿಯಾದರು. 77 ರನ್(59ಎ, 4ಬೌ, 4ಸಿ) ಗಳಿಸಿದ್ದ ಜಡೇಜ ಅವರು ಬೌಲ್ಟ್ ಎಸೆತದಲ್ಲಿ ವಿಲಿಯಮ್ಸನ್‌ಗೆ ಕ್ಯಾಚ್ ನೀಡಿದರು.

ಜಡೇಜ ನಿರ್ಗಮನದ ಬಳಿಕ ಒತ್ತಡಕ್ಕೊಳಗಾದ ಧೋನಿ 49ನೇ ಓವರ್‌ನಲ್ಲಿ ಫರ್ಗ್ಯುಸನ್‌ರ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಎರಡನೇ ಎಸೆತದಲ್ಲಿ ರನ್ ತೆಗೆಯಲಿಲ್ಲ. ಮೂರನೇ ಎಸೆತದಲ್ಲಿ ಚೆಂಡನ್ನು ರಕ್ಷಣಾತ್ಮವಾಗಿ ಎದುರಿಸಿ ಭುವನೇಶ್ವರ್ ಕುಮಾರ್ ಜೊತೆ ಒಂದು ರನ್ ತೆಗೆದರು. ಅರ್ಧಶತಕ ಪೂರೈಸಿದರು. ಇನ್ನೊಂದು ರನ್ ತೆಗೆಯಲು ಓಡುತ್ತಿದ್ದಾಗ ಗಪ್ಟಿಲ್ ಚೆಂಡನ್ನು ಸ್ಟಂಪ್‌ಗೆ ನೇರ ಗುರಿಯಿಟ್ಟು ಹೊಡೆದರು. ಅವರ ಗುರಿ ತಪ್ಪಲಿಲ್ಲ. ಧೋನಿ 50 ರನ್(72ಎ, 1ಬೌ,1ಸಿ) ಗಳಿಸಿ ಪೆವಿಲಿಯನ್ ಸೇರಿದರು. ಅಲ್ಲಿಗೆ ಭಾರತದ ಹೋರಾಟ ಬಹುತೇಕ ಅಂತ್ಯಗೊಂಡಿತ್ತು. 48.3 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 216 ರನ್ ಗಳಿಸಿದ್ದ ಭಾರತ ಈ ಮೊತ್ತಕ್ಕೆ ಇನ್ನೂ 5 ರನ್ ಸೇರಿಸುವಷ್ಟರಲ್ಲಿ ಉಳಿದ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಆಲೌಟಾಗಿತ್ತು. ಭಾರತದ ಅಗ್ರ ಸರದಿಯ ಬ್ಯಾಟ್ಸ್ ಮನ್‌ಗಳ ಬೇಜವಾಬ್ದಾರಿಯ ಆಟದಿಂದಾಗಿ ಭಾರತ ಸೆಮಿಫೈನಲ್‌ನಲ್ಲೇ ಸತತ ಎರಡನೇ ಬಾರಿ ಸೋತು ನಿರ್ಗಮಿಸಿದೆ.

ಧೋನಿ ಕಳೆದ ಮೂರು ತಿಂಗಳಿನಿಂದ ವಿಶ್ರಾಂತಿ ಇಲ್ಲದೆ ಕ್ರಿಕೆಟ್ ಆಡುತ್ತಿದ್ದಾರೆ. ಐಪಿಎಲ್ ನಲ್ಲಿ ವಿಶ್ರಾಂತಿ ಇಲ್ಲದೆ ಆಡಿದ್ದರು. ಆದರೆ ಅವರ ಪ್ರದರ್ಶನ ಚೆನ್ನಾಗಿಯೇ ಇತ್ತು. ವಿಶ್ವಕಪ್‌ನಲ್ಲಿ ಕೈ ಬೆರಳಿಗೆ ಗಾಯವಾಗಿದ್ದರೂ, ಅವರು ವಿಶ್ರಾಂತಿ ಬಯಸಲಿಲ್ಲ. ತಂಡ ಸಂಕಷ್ಟಕ್ಕೆ ಸಿಲುಕಿದಾಗ ಹೋರಾಟ ನಡೆಸಿದ್ದರು. ಇದೀಗ ಆಯ್ಕೆ ಸಮಿತಿಯು ಧೋನಿಗೆ ಸ್ವಲ್ಪ ಸಮಯ ವಿಶ್ರಾಂತಿ ನೀಡಲು ಮುಂದಾಗಿದೆ ಎನ್ನಲಾಗಿದೆ.

ಧೋನಿ ಅನುಪಸ್ಥಿತಿಯಲ್ಲಿ ಆಯ್ಕೆ ಸಮಿತಿಯು ರಿಷಭ್ ಪಂತ್‌ಗೆ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ದಿಲ್ಲಿಯ ವಿಕೆಟ್ ಕೀಪರ್ ಪಂತ್ ಈ ಹಿಂದೆ ಭಾರತ ಎ ತಂಡದಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದರು. ಶಿಖರ್ ಧವನ್ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಹಿನ್ನೆಲೆಯಲ್ಲಿ ಪಂತ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಭುವನೇಶ್ವರ ಕುಮಾರ್ ಗಾಯದ ಕಾರಣದಿಂದಾಗಿ ವಿಶ್ವಕಪ್‌ನ ಮೂರು ಪಂದ್ಯಗಳಲ್ಲಿ ಆಡಿರಲಿಲ್ಲ. ವೆಸ್ಟ್‌ಇಂಡೀಸ್ ಪ್ರವಾಸಕ್ಕೆ ಭುವನೇಶ್ವರ್ ಕುಮಾರ್‌ಗೆ ವಿಶ್ರಾಂತಿ ನೀಡಿದರೆ ಖಲೀಲ್ ಅಹ್ಮದ್, ನವ್‌ದೀಪ್ ಸೈನಿ ಅಥವಾ ದೀಪಕ್ ಚಹಾರ್ ತಂಡದಲ್ಲಿ ಅವಕಾಶ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ.

 ಕೊಹ್ಲಿಗೆ ವಿಂಡೀಸ್ ಪ್ರವಾಸಕ್ಕೆ ಪೂರ್ತಿಯಾಗಿ ವಿಶ್ರಾಂತಿ ನೀಡಿದರೆ ಭಾರತದ ಏಕದಿನ ತಂಡವನ್ನು ರೋಹಿತ್ ಶರ್ಮಾ ಮತ್ತು ಟೆಸ್ಟ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News