ಕಾಂಗ್ರೆಸ್ ನಾಯಕರಿಂದಲೇ ತಂದೆಯ ಮೂಲೆಗುಂಪು: ಸೌಮ್ಯಾರೆಡ್ಡಿ
ಬೆಂಗಳೂರು, ಜು.13: ಕೆಲ ನಾಯಕರ ಸ್ವಾರ್ಥದಿಂದಾಗಿ ನಮ್ಮ ತಂದೆ ರಾಮಲಿಂಗಾರೆಡ್ಡಿಯನ್ನು ಕಾಂಗ್ರೆಸ್‌ನಲ್ಲಿ ಮೂಲೆಗುಂಪು ಮಾಡಿದ್ದಾರೆ. ಅದೇ ಬೇಸರದಿಂದಾಗಿ ರಾಜೀನಾಮೆ ಸಲ್ಲಿಸಿದ್ದಾರೆಂದು ಶಾಸಕಿ ಸೌಮ್ಯಾರೆಡ್ಡಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆ ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಅವರು ಸಚಿವ ಸ್ಥಾನ ಸಿಗುತ್ತದೆ ಎಂದು ರಾಜೀನಾಮೆ ನೀಡಿಲ್ಲ. ಅವರ ರಾಜೀನಾಮೆಗೆ ಕಾರಣ ಬೇರೆ. ಅದು ಎಲ್ಲರಿಗೂ ಗೊತ್ತಿದೆ ಎಂದರು.
ಏಳು ಬಾರಿ ಶಾಸಕ ಹಾಗೂ ಸಚಿವರಾಗಿ ಕಾರ್ಯನಿರ್ವಹಿಸಿರುವ ನನ್ನ ತಂದೆ ರಾಮಲಿಂಗಾರೆಡ್ಡಿಯನ್ನು ಮೈತ್ರಿ ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ. ಇದಕ್ಕೆ ಕಾರಣ ಕೆಲವು ಸ್ವಾರ್ಥ ಕಾಂಗ್ರೆಸ್ ನಾಯಕರೇ ಆಗಿದ್ದಾರೆ. ಅವರ ಹೆಸರನ್ನು ಹೇಳಲು ಇಚ್ಛಿಸುವುದಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದರು.
ನನ್ನ ತಂದೆ 45 ವರ್ಷಗಳಿಂದ ಕಾಂಗ್ರೆಸ್‌ಗಾಗಿ ದುಡಿದಿದ್ದಾರೆ. ಈಗ ರಾಜೀನಾಮೆ ನೀಡಿದ ಮೇಲೆ ಮನವೊಲಿಕೆಗೆ ಮುಂದಾಗುತ್ತಿದ್ದಾರೆ. ಈಗ ಅವರಿಗೆ ನಮ್ಮ ತಂದೆ ಬೆಲೆ ಅರ್ಥವಾಯಿತಾ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಅವರು ಕಿಡಿ ಕಾರಿದರು.