ರಾಮಲಿಂಗಾರೆಡ್ಡಿಯನ್ನು ಭೇಟಿಯಾದ ಶಾಸಕ ವಿಶ್ವನಾಥ್

Update: 2019-07-13 15:05 GMT

ಬೆಂಗಳೂರು, ಜು.13: ಸದನದಲ್ಲಿ ವಿಶ್ವಾಸಮತ ಯಾಚಿಸಲು ಸಿದ್ಧವಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಶಾಸಕ ಸ್ಥಾನ್ಕಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರನ್ನು ಶಾಸಕ ಎಸ್.ಆರ್.ವಿಶ್ವನಾಥ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೂಚನೆ ಮೇರೆಗೆ ರಾಮಲಿಂಗಾರೆಡ್ಡಿಯನ್ನು ಲಕ್ಕಸಂದ್ರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದ ವಿಶ್ವನಾಥ್, ಯಡಿಯೂರಪ್ಪ ಸೂಚನೆಯ ಮೇರೆಗೆ ಬಂದಿದ್ದೇನೆ. ಯಾವುದೇ ಕಾರಣಕ್ಕೂ ನಿಲುವು ಬದಲಿಸದಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಬಹುಮತ ಸಾಬೀತುಪಡಿಸಲು ಅವಕಾಶ ಕೇಳಿದ್ದರ ಬಗ್ಗೆ ಚರ್ಚೆ ನಡೆಸಿದರು. ಕುಮಾರಸ್ವಾಮಿ ರಾಜೀನಾಮೆ ಬಳಿಕ ಸರಕಾರ ರಚನೆಗೆ ಬಿಜೆಪಿಗೆ ಅವಕಾಶವಿದೆ. ಅದಕ್ಕೆ ನಿಮ್ಮ ಬೆಂಬಲ ಬೇಕು ಎಂದು ಮನವಿ ಮಾಡಿದರು ಎಂದು ತಿಳಿದುಬಂದಿದೆ.

ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಬೆಂಬಲ ನೀಡಲ್ಲ ಎಂದಿರುವ ರಾಮಲಿಂಗಾರೆಡ್ಡಿ, ಈಗ ನೀಡಿರುವ ರಾಜೀನಾಮೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ನಾನು ರಾಜೀನಾಮೆ ನೀಡುವ ಮೊದಲೇ ಕಾಂಗ್ರೆಸ್ ನಾಯಕರು ಯೋಚನೆ ಮಾಡಬೇಕಿತ್ತು. ಈಗ ಎಲ್ಲವೂ ಮುಗಿದು ಹೋಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ರಾಮಲಿಂಗಾರೆಡ್ಡಿ ಭೇಟಿಗೆ ತೆರಳಿದ್ದ ವಿಶ್ವನಾಥ್ ಬರುವಿಕೆಗಾಗಿ ಕಾದಿದ್ದ ಯಡಿಯೂರಪ್ಪ, ಅವರು ಬಂದ ಕೂಡಲೇ ಅಲ್ಲಿ ನಡೆದ ಮಾತುಕತೆ ಹಾಗೂ ರಾಮಲಿಂಗಾರೆಡ್ಡಿ ನೀಡಿದ ವಿವರ ಕುರಿತು ಮಾಹಿತಿ ಪಡೆದುಕೊಂಡರು ಎಂದು ತಿಳಿದುಬಂದಿದೆ. ಮಂಗಳವಾರದ ಸುಪ್ರೀಂ ಕೋರ್ಟ್ ತೀರ್ಪಿನವರೆಗೆ ಕಾದು ನೋಡಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News