ವಿಶ್ವ ಕ್ರಿಕೆಟ್ ಗೆ ಯಾರಾಗಲಿದ್ದಾರೆ ಹೊಸ ದೊರೆ?

Update: 2019-07-13 18:31 GMT

ಲಂಡನ್, ಜು.13: ಪ್ರಶಸ್ತಿ ಫೇವರಿಟ್ ಇಂಗ್ಲೆಂಡ್ ತಂಡ ಐತಿಹಾಸಿಕ ಲಾರ್ಡ್ಸ್‌ಕ್ರೀಡಾಂಗಣದಲ್ಲಿ ರವಿವಾರ ನಡೆಯಲಿರುವ 12ನೇ ಆವೃತ್ತಿಯ ಐಸಿಸಿ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಸವಾಲನ್ನು ಎದುರಲಿಸಲಿದೆ. ಉಭಯ ತಂಡಗಳು ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿವೆ. ಯಾರೇ ಗೆದ್ದರೂ ವಿಶ್ವ ಕ್ರಿಕೆಟ್‌ನಲ್ಲಿ ಹೊಸ ಚಾಂಪಿಯನ್ ತಂಡ ಉದಯವಾಗುವುದು ನಿಶ್ಚಿತ.

ಕಳೆದ 7 ವಾರಗಳ ಕಾಲ 45 ಗ್ರೂಪ್ ಪಂದ್ಯಗಳು ಹಾಗೂ 2 ಸೆಮಿ ಫೈನಲ್ ಪಂದ್ಯಗಳು ನಡೆದಿದ್ದು, ಇದೀಗ ಟೂರ್ನಿಯು ಫೈನಲ್ ಹಂತ ತಲುಪಿದೆ.

ಐರ್ಲೆಂಡ್ ಮೂಲದ ಇಯಾನ್ ಮೊರ್ಗನ್ ನೇತೃತ್ವದ ಇಂಗ್ಲೆಂಡ್ ತಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯವನ್ನು ಸೆಮಿ ಫೈನಲ್‌ನಲ್ಲಿ ಸುಲಭವಾಗಿ ಸೋಲಿಸಿ 27 ವರ್ಷಗಳ ಬಳಿಕ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದೆ. ನಾಲ್ಕನೇ ಬಾರಿ ಫೈನಲ್‌ಗೆ ತಲುಪಿರುವ ಆಂಗ್ಲರು 1979, 1987 ಹಾಗೂ 1992ರಲ್ಲಿ ರನ್ನರ್ಸ್-ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದರು. ಇದೀಗ ತನಗೆ ಪರಿಚಯವಿರುವ ವಾತಾವರಣದಲ್ಲಿ ತವರು ಪ್ರೇಕ್ಷಕರ ಸಮ್ಮುಖದಲ್ಲಿ ಪ್ರಶಸ್ತಿ ಎತ್ತಿ ಹಿಡಿಯುವ ಅಪೂರ್ವ ಅವಕಾಶ ಆಂಗ್ಲರಿಗೆ ಒದಗಿಬಂದಿದೆ. 1966ರಲ್ಲಿ ಸರ್ ಅಲ್ಫ್ ರಾಮ್ಸೆ ತಂಡ ಫಿಫಾ ವಿಶ್ವಕಪ್‌ನ್ನು ಜಯಿಸಿದ ಬಳಿಕ ಇಂಗ್ಲೆಂಡ್ ತಂಡದ ಜಾಗತಿಕ ಮಟ್ಟದಲ್ಲಿ ಪ್ರಶಸ್ತಿ ಗೆಲ್ಲಬೇಕೆಂಬ ಕನಸು ಈ ತನಕ ಈಡೇರಿಲ್ಲ. ಮತ್ತೊಂದೆಡೆ, ನ್ಯೂಝಿಲ್ಯಾಂಡ್ ತಂಡ 2015ರ ಆವೃತ್ತಿಯ ವಿಶ್ವಕಪ್‌ನಲ್ಲಿ ಫೈನಲ್ ತಲುಪಿತ್ತು. ಆದರೆ, ಮೆಲ್ಬೋರ್ನ್‌ನಲ್ಲಿ ನಡೆದ ಫೈನಲ್ ಫೈಟ್‌ನಲ್ಲಿ ಆಸ್ಟ್ರೇಲಿಯಕ್ಕೆ ಶರಣಾಗಿ ಎರಡನೇ ಸ್ಥಾನ ಪಡೆದಿತ್ತು. ಇದೀಗ ಎರಡನೇ ಪ್ರಯತ್ನದಲ್ಲಿ ಪ್ರಶಸ್ತಿಗೆ ಮುತ್ತಿಕ್ಕುವ ವಿಶ್ವಾಸದಲ್ಲಿದೆ.

ಎರಡೂ ತಂಡಗಳ ನಾಯಕರಿಗೆ ಮೊದಲ ಬಾರಿ ತಮ್ಮ ತಂಡ ವಿಶ್ವಕಪ್‌ನ್ನು ಗೆಲ್ಲಲು ಮಾರ್ಗದರ್ಶನ ನೀಡುವುದರೊಂದಿಗೆ ರಾಷ್ಟ್ರೀಯ ಹೀರೋವಾಗುವ ಅವಕಾಶ ಒದಗಿಬಂದಿದೆ.

 2015ರ ವಿಶ್ವಕಪ್‌ನ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ ಬಳಿಕ ಇಂಗ್ಲೆಂಡ್ ಊಹೆಗೂ ಮೀರಿ ಆಕ್ರಮಣಕಾರಿ ಹಾಗೂ ನಿರ್ಭಿತಿ ಮಾದರಿಯ ಕ್ರಿಕೆಟ್ ಆಡಿ ಎಲ್ಲ ಕ್ರಿಕೆಟ್ ಪ್ರೇಮಿಗಳನ್ನು ಬೆಚ್ಚಿ ಬೀಳಿಸಿದೆ. ಕಿವೀಸ್ ತಂಡ ಗ್ರೂಪ್ ಹಂತದಲ್ಲಿ ಇಂಗ್ಲೆಂಡ್ ವಿರುದ್ಧ 119 ರನ್‌ಗಳಿಂದ ಹೀನಾಯವಾಗಿ ಸೋತಿತ್ತು. ಫೈನಲ್‌ನಲ್ಲಿ ತಪ್ಪನ್ನು ತಿದ್ದಿಕೊಂಡು ತಕ್ಕ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.

 ಐಸಿಸಿ ಪ್ರಕಾರ, ರವಿವಾರದ ಹವಾಮಾನ ಉತ್ತಮವಾಗಿದೆ. ಮಧ್ಯಾಹ್ನ ಹಾಗೂ ಸಂಜೆ ಸೂರ್ಯನ ಕಿರಣ ಕಾಣಿಸಿಕೊಳ್ಳಲಿದೆ. ಲಾರ್ಡ್ಸ್‌ನಲ್ಲಿ ಕಪ್ಪು ಮೋಡ ಕಾಣಿಸಿಕೊಳ್ಳದು ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಫೈನಲ್‌ನಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಯಾಗದು.

ಬರ್ಮಿಂಗ್‌ಹ್ಯಾಮ್‌ನಲ್ಲಿ ಗುರುವಾರ ನಡೆದ ಎರಡನೇ ಸೆಮಿ ಫೈನಲ್‌ನಲ್ಲಿ ವೇಗದ ಬೌಲರ್‌ಗಳಾದ ಜೋಫ್ರಾ ಆರ್ಚರ್ ಹಾಗೂ ಕ್ರಿಸ್ ವೋಕ್ಸ್ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿ ಆಸ್ಟ್ರೇಲಿಯ 14 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಳ್ಳುವಂತೆ ಮಾಡಿದ್ದರು. ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಉರುಳಿಸಿದ್ದರು.

ಡೇವಿಡ್ ವಾರ್ನರ್ ಸಹಿತ ಆಸ್ಟ್ರೇಲಿಯದ ಅಗ್ರ ಸರದಿಯ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿ ಪರಿಣಮಿಸಿದ್ದ ಕ್ರಿಸ್ ವೋಕ್ಸ್ 20 ರನ್‌ಗೆ 3 ವಿಕೆಟ್‌ಗಳನ್ನು ಪಡೆದಿದ್ದರು. ಹೊಸ ಚೆಂಡಿನ ಜೊತೆಗಾರ ಆರ್ಚರ್ ಜೊತೆಗೂಡಿ 10 ಪಂದ್ಯಗಳಲ್ಲಿ 32 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟೂರ್ನಿಯಲ್ಲಿ ಒಟ್ಟು 19 ಪಡೆದಿರುವ ಆರ್ಚರ್ ಹಾಗೂ 13 ವಿಕೆಟ್‌ಗಳನ್ನು ಉರುಳಿಸಿರುವ ವೋಕ್ಸ್ ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಮಾರ್ಕ್‌ವುಡ್(17 ವಿಕೆಟ್)ಅಸ್ಥಿರ ಪ್ರದರ್ಶನದ ಹೊರತಾಗಿಯೂ ಗಮನಾರ್ಹ ಸಾಧನೆ ಮಾಡಿದ್ದು, ಆದಿಲ್ ರಶೀದ್(11 ವಿಕೆಟ್)ಸೆಮಿಫೈನಲ್‌ನಲ್ಲಿ ತನ್ನ ಶಕ್ತಿ ಪ್ರದರ್ಶಿಸಿದ್ದರು.

    ಇಂಗ್ಲೆಂಡ್‌ನ ಜೇಸನ್ ರಾಯ್(426 ರನ್) ಹಾಗೂ ಜಾನಿ ಬೈರ್‌ಸ್ಟೋವ್(496 ರನ್) ಏಕದಿನ ಇತಿಹಾಸದ ಅತ್ಯಂತ ಯಶಸ್ವಿ ಜೋಡಿ ಎನ್ನುವುದನ್ನು ಅಂಕಿ-ಅಂಶ ಸಾರಿ ಹೇಳುತ್ತಿವೆ. ಆಸ್ಟ್ರೇಲಿಯ ವಿರುದ್ಧ ಜಾನಿ ಬೈರ್‌ಸ್ಟೋವ್ ಅವರೊಂದಿಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 124 ರನ್ ಸೇರಿಸಿದ್ದ ಜೇಸನ್ ರಾಯ್ ಭರ್ಜರಿ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ರಾಯ್ ಅವರು ಬೈರ್‌ಸ್ಟೋವ್ ಅವರೊಂದಿಗೆ ನಾಲ್ಕು ಬಾರಿ ಶತಕದ ಜೊತೆಯಾಟ ನಡೆಸಿದ್ದಾರೆ. ರಾಯ್ ಸ್ನಾಯು ಸೆಳೆತದಿಂದಾಗಿ ಗ್ರೂಪ್ ಹಂತದಲ್ಲಿ 3 ಪಂದ್ಯಗಳಲ್ಲಿ ಆಡಿರಲಿಲ್ಲ. ರಾಯ್ ತಂಡಕ್ಕೆ ವಾಪಸಾದ ಬಳಿಕ ಇಂಗ್ಲೆಂಡ್ ಮೂರು ಪಂದ್ಯಗಳನ್ನು ಸಲೀಸಾಗಿ ಗೆದ್ದುಕೊಂಡಿತ್ತು. ಮತ್ತೊಂದೆಡೆ, ನ್ಯೂಝಿಲ್ಯಾಂಡ್ ತಂಡ ಎಡಗೈ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಸಾರಥ್ಯದಲ್ಲಿ ಸಮತೋಲಿತ ಬೌಲಿಂಗ್ ದಾಳಿ ಹೊಂದಿದೆ. ಆದರೆ, ಬ್ಯಾಟಿಂಗ್‌ನ ವಿಷಯದಲ್ಲಿ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಹಿರಿಯ ಬ್ಯಾಟ್ಸ್‌ಮನ್ ರೋಸ್ ಟೇಲರ್‌ನ್ನು(335 ರನ್)ಹೆಚ್ಚು ಅವಲಂಬಿಸಿದೆ. 8 ಇನಿಂಗ್ಸ್‌ಗಳಲ್ಲಿ 2 ಶತಕ ಹಾಗೂ 2 ಅರ್ಧಶತಕಗಳ ಸಹಿತ ಒಟ್ಟು 548 ರನ್ ಗಳಿಸಿರುವ ವಿಲಿಯಮ್ಸನ್ ಎಲ್ಲರಿಗೂ ಮಾದರಿಯಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ತನ್ನ ಮೊದಲಿನ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಅವರು 9 ಇನಿಂಗ್ ್ಸಗಳಲ್ಲಿ ಕೇವಲ 167 ರನ್ ಗಳಿಸಿದ್ದಾರೆ. ಗಪ್ಟಿಲ್ 2015ರ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಔಟಾಗದೆ 237 ರನ್ ಗಳಿಸಿದ್ದಲ್ಲದೆ ಟೂರ್ನಿಯಲ್ಲಿ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಭಾರತ ವಿರುದ್ಧ ಸೆಮಿ ಫೈನಲ್‌ನಲ್ಲಿ ಧೋನಿಯವರನ್ನು ನೇರ ಎಸೆತದಿಂದ ರನೌಟ್ ಮಾಡಿದ್ದ ಗಪ್ಟಿಲ್ ತಾನೊಬ್ಬ ಉತ್ತಮ ಫೀಲ್ಡರ್ ಎಂದು ತೋರಿಸಿಕೊಟ್ಟಿದ್ದರು. ಭಾರತ ವಿರುದ್ಧ ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ 18 ರನ್‌ಗಳ ರೋಚಕ ಜಯ ಸಾಧಿಸಿರುವ ಕಿವೀಸ್ ಆತಿಥೇಯ ಇಂಗ್ಲೆಂಡ್‌ಗೆ ಶಾಕ್ ನೀಡಿ ಚೊಚ್ಚಲ ಪ್ರಶಸ್ತಿ ಎತ್ತಿಹಿಡಿಯವ ಉತ್ಸಾಹದಲ್ಲಿದೆ. ಅಮೋಘ ಪ್ರದರ್ಶನ ನೀಡಿದ್ದ ಬೌಲ್ಟ್ ಹಾಗೂ ಮ್ಯಾಟ್ ಹೆನ್ರಿ ವಿಶ್ವದ ಅತ್ಯಂತ ಶಕ್ತಿಶಾಲಿ ಅಗ್ರ ಕ್ರಮಾಂಕವನ್ನು ಹೊಂದಿರುವ ಭಾರತಕ್ಕೆ ನೀರು ಕುಡಿಸಿದ್ದರು. 5 ರನ್‌ಗೆ 3 ವಿಕೆಟ್ ಉಡಾಯಿಸಿದ್ದರು. ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್, ಸೂಪರ್ ಫೀಲ್ಡಿಂಗ್, ವಿಲಿಯಮ್ಸನ್ ಹಾಗೂ ಟೇಲರ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಕೂಡ ಕಿವೀಸ್ ಗೆಲುವಿಗೆ ಪೂರಕವಾಗಿ ಪರಿಣಮಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News