ದಲಾಯಿಲಾಮ ಉತ್ತರಾಧಿಕಾರಿ ಆಯ್ಕೆಯಲ್ಲಿ ಭಾರತದ ಹಸ್ತಕ್ಷೇಪ ಬೇಡ: ಚೀನಾ ಎಚ್ಚರಿಕೆ

Update: 2019-07-14 19:05 GMT

ಚೀನಾ ಬೀಜಿಂಗ್,ಜು.14: ಟಿಬೆಟಿಯನ್ ಬೌದ್ಧರ ಧರ್ಮಗುರು ದಲಾಯಿಲಾಮ ಅವರ ಉತ್ತರಾಧಿಕಾರಿ ಯಾರೆಂಬುದನ್ನು ಚೀನಾದಲ್ಲೇ ನಿರ್ಧರಿಸಲಾಗುವುದು ಹಾಗೂ ಈ ವಿಷಯದಲ್ಲಿ ಭಾರತವು ಯಾವುದೇ ರೀತಿಯ ಹಸ್ತಕ್ಷೇಪ ಮಾಡಿದಲ್ಲಿ ಉಭಯದೇಶಗಳ ದ್ವಿಪಕ್ಷೀಯ ಬಾಂಧವ್ಯದ ಮೇಲೆ ಪರಿಣಾಮ ಬೀರಲಿದೆಯೆಂದು ಚೀನಾ ರವಿವಾರ ಎಚ್ಚರಿಕೆ ನೀಡಿದೆ.

ದಲಾಯಿಲಾಮಾ ಅವರ ‘ಅವತಾರ’ (ಉತ್ತರಾಧಿಕಾರಿ)ಕ್ಕೆ ಚೀನಾ ಸರಕಾರ ಅನುಮೋದನೆ ನೀಡಬೇಕು ಹಾಗೂ ಅವರ ಆಯ್ಕೆ 2 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಪ್ರಕ್ರಿಯೆಯನ್ನು ಆಧರಿಸಿ ದೇಶದೊಳಗೆ ನಡೆಯಬೇಕಾಗಿದೆ ಎಂದು ಚೀನಾ ಹೇಳಿದೆ.

ದಲಾಯಿಲಾಮ ಅವರ ಉತ್ತರಾಧಿಕಾರಿ ಆಯ್ಕೆಯಂತಹ ಸೂಕ್ಷ್ಮ ವಿಷಯದ ಬಗ್ಗೆ ಚೀನಾ ಮೊದಲ ಬಾರಿ ನೀಡಿರುವ ಸ್ಪಷ್ಟನೆ ಇದಾಗಿದೆ.

‘‘ದಲಾಯಿಲಾಮ ಅವರ ಅವತಾರ ಯಾರೆಂಬುದು ಐತಿಹಾಸಿಕ, ಧಾರ್ಮಿಕ ಹಾಗೂ ರಾಜಕೀಯ ವಿಷಯವಾಗಿದೆ. ದಲಾಯಿಲಾಮಾ ಅವರ ಅವತಾರದ ವ್ಯಕ್ತಿ ಯಾರೆಂಬುದನ್ನು ನಿರೂಪಿಸಲು ಸ್ಥಾಪಿತ ಐತಿಹಾಸಿಕ ಸಂಸ್ಥೆಗಳಿವೆ ಎಂದು ಟಿಬೆಟ್‌ನ ಉಪಸಚಿವ ದರ್ಜೆಯ ಅಧಿಕಾರಿ ವಾಂಗ್ ನೆಂಗ್ ಶೆಂಗ್ ತಿಳಿಸಿದ್ದಾರೆ.

ದಲಾಯಿಲಾಮಾ ಅವರಿಗೆ ಈಗ 84 ವರ್ಷ ವಯಸ್ಸಾಗಿದೆ. ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಒಂದೆರಡು ವರ್ಷಗಳಿಂದ ಅವರ ಉತ್ತರಾಧಿಕಾರಿಯ ಆಯ್ಕೆಯ ಕುರಿತಾದ ವಿವಾದವು ಹೆಚ್ಚಿನ ಮಹತ್ವವನ್ನು ಪಡೆದಿದೆ.

ಟಿಬೆಟಿಯನ್ ಬೌದ್ಧಧರ್ಮೀಯರ ಸಂಪ್ರದಾಯದ ಪ್ರಕಾರ, ಹಾಲಿ ದಲಾಯಿಲಾಮಾ ಅವರ ಅವತಾರ ಯಾರೆಂಬುದನ್ನು ನಿರ್ಧರಿಸುವುದು ಅವರ ವ್ಯಕ್ತಿಗಳಾಗಲಿ ಅಥವಾ ಇತರ ದೇಶಗಳಲ್ಲಿ ವಾಸಿಸುವ ಕೆಲವು ವ್ಯಕ್ತಿಗಳ ಗುಂಪುಗಳಾಗಲಿ ಅಲ್ಲ’’ ಎಂದು ಅವರು ಹೇಳಿದರು.

 ಹಾಲಿ ದಲಾಯಿಲಾಮಾ ಅವರಿಗೆ ಬೀಜಿಂಗ್ ಮಾನ್ಯತೆ ನೀಡಿದೆ. ಅವರ ಉತ್ತರಾಧಿಕಾರಿಯನ್ನು ಚೀನಾದಲ್ಲಿ ಬಂಗಾರದ ಪಾತ್ರೆಯಲ್ಲಿ ಲಾಟರಿ ತೆಗೆಯುವ ಪ್ರಕ್ರಿಯೆಯ ಮೂಲಕ ಮಾಡಲಾಗುವುದೆಂದು ಟಿಬೆಟ್ ಸ್ವಾಯತ್ತ ಪ್ರಾಂತದ ಮಹಾನಿರ್ದೇಶಕ ವಾಂಗ್ ತಿಳಿಸಿದರು.

ಹಾಲಿ ದಲಾಯಿ ಲಾಮ ಅವರು 1959ರಲ್ಲಿ ಟಿಬೆಟನ್ನು ಚೀನಾ ಅಕ್ರಮಿಸಿಕೊಂಡ ಬಳಿಕ ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News