ವಿಲಿಯಮ್ಸನ್ ವಿಶ್ವಕಪ್‌ನಲ್ಲಿ ಗರಿಷ್ಠ ಮೊತ್ತ ಗಳಿಸಿದ ನಾಯಕ

Update: 2019-07-15 03:28 GMT

ಲಂಡನ್, ಜು.14: ನ್ಯೂಝಿಲ್ಯಾಂಡ್‌ನ ಕೇನ್ ವಿಲಿಯಮ್ಸನ್ ಒಂದೇ ವಿಶ್ವಕಪ್‌ನಲ್ಲಿ ಗರಿಷ್ಠ ಮೊತ್ತ ಗಳಿಸಿದ ನಾಯಕನೆಂಬ ಕೀರ್ತಿಗೆ ಭಾಜನರಾದರು. ಈ ಮೂಲಕ ಶ್ರೀಲಂಕಾದ ಮಹೇಲ ಜಯವರ್ಧನೆ ಹೆಸರಲ್ಲಿದ್ದ 12 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು.

ಇಂಗ್ಲೆಂಡ್ ವಿರುದ್ಧ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ತನ್ನ ರನ್ ಖಾತೆ ತೆರೆದ ತಕ್ಷಣ ವಿಲಿಯಮ್ಸನ್ ಈ ಸಾಧನೆ ಮಾಡಿದರು. 2007ರ ಆವೃತ್ತಿಯ ವಿಶ್ವಕಪ್‌ನಲ್ಲಿ ಶ್ರೀಲಂಕಾದ ನಾಯಕ ಜಯವರ್ಧನೆ 548 ರನ್ ಗಳಿಸಿದ್ದರು. ಆಸ್ಟ್ರೇಲಿಯದ ರಿಕಿ ಪಾಂಟಿಂಗ್(2007, 539 ರನ್), ಆ್ಯರೊನ್ ಫಿಂಚ್(507,2019) ಗರಿಷ್ಠ ರನ್ ಗಳಿಸಿದ ನಾಯಕರ ಪಟ್ಟಿಯಲ್ಲಿ 3 ಹಾಗೂ 4ನೇ ಸ್ಥಾನದಲ್ಲಿದ್ದಾರೆ.

 53 ಎಸೆತಗಳಲ್ಲಿ 2 ಬೌಂಡರಿ ಸಹಿತ 30 ರನ್ ಗಳಿಸಿದ ವಿಲಿಯಮ್ಸನ್ ವೇಗದ ಬೌಲರ್ ಲಿಯಾಮ್ ಪ್ಲಂಕೆಟ್‌ಗೆ ವಿಕೆಟ್ ಒಪ್ಪಿಸಿದರು. ವಿಲಿಯಮ್ಸನ್ ಟೂರ್ನಿಯಲ್ಲಿ ಒಟ್ಟು 578 ರನ್ ಗಳಿಸಿದ್ದಾರೆ. ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ವಿಶ್ವಕಪ್ ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿರುವ ವಿಲಿಯಮ್ಸನ್ 10 ಇನಿಂಗ್ಸ್‌ಗಳಲ್ಲಿ 2 ಶತಕ ಹಾಗೂ 2 ಅರ್ಧಶತಕ ಗಳಿಸಿದ್ದಾರೆ. ವೆಸ್ಟ್‌ಇಂಡೀಸ್ ವಿರುದ್ಧ ಗರಿಷ್ಠ ವೈಯಕ್ತಿಕ ಸ್ಕೋರ್(148)ಗಳಿಸಿದ್ದರು.

ವಿಶ್ವಕಪ್ ಟೂರ್ನಿಯೊಂದರಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆ ಭಾರತದ ಸಚಿನ್ ತೆಂಡುಲ್ಕರ್ ಹೆಸರಲ್ಲಿದೆ. ಅವರು 2003ರ ವಿಶ್ವಕಪ್‌ವೊಂದರಲ್ಲಿ 673 ರನ್ ಗಳಿಸಿದ್ದರು. 2007ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯದ ಮ್ಯಾಥ್ಯೂ ಹೇಡನ್(659, 2007)ಸಚಿನ್ ಸಾಧನೆಯ ಸಮೀಪ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News