ಫೈನಲ್ ಪಂದ್ಯದಲ್ಲಿನ ಸೋಲು ಸಹಿಸಲಾರದ ನೋವಾಗಿದೆ: ವಿಲಿಯಮ್ಸನ್

Update: 2019-07-15 18:42 GMT

 ಲಂಡನ್, ಜು.16: ವಿಶ್ವಕಪ್‌ನಲ್ಲಿ ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸುವ ಮೂಲಕ ನ್ಯೂಝಿಲ್ಯಾಂಡ್ ತಂಡ ಎಲ್ಲ ಅಭಿಮಾನಿಗಳ ಹೃದಯ ಗೆದ್ದಿದೆ. ಕ್ರಿಕೆಟ್ ಒಂದು ಜಂಟಲ್‌ಮ್ಯಾನ್ ಗೇಮ್’ ಎನ್ನುವುದಕ್ಕೆ ನ್ಯೂಝಿಲ್ಯಾಂಡ್ ತಂಡ ಒಂದು ಮಾದರಿಯಾಗಿದೆ.

ನ್ಯೂಝಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಹಾಗೂ ನಾಯಕತ್ವದಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನಕ್ಕೆ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ‘‘ಫೈನಲ್ ಪಂದ್ಯದಲ್ಲಿನ ಸೋಲು ಸಹಿಸಲಾರದ ನೋವಾಗಿದೆ. ಇಂಗ್ಲೆಂಡ್ ತಂಡ ನಮಗಿಂತ ಹೆಚ್ಚು ಬೌಂಡರಿಗಳನ್ನು ಗಳಿಸಿದ ಕಾರಣ ಪಂದ್ಯದಲ್ಲಿ ಜಯಶಾಲಿಯಾಗಿದೆ. ಎರಡು ತಂಡಗಳು ಪ್ರಶಸ್ತಿಗಾಗಿ ತೀವ್ರ ಹೋರಾಟ ನಡೆಸಿವೆ. ನಮ್ಮಿಬ್ಬರನ್ನು ಪ್ರತ್ಯೇಕಿಸಲು ಎರಡು ಬಾರಿ ಯತ್ನಿಸಲಾಗಿತ್ತು. ಆದರೂ ಸಾಧ್ಯವಾಗಲಿಲ್ಲ. ಚೆಂಡು ಸ್ಟೋಕ್ಸ್ ಬ್ಯಾಟ್‌ಗೆ ತಗಲಿದ್ದು ದುರದೃಷ್ಟಕರ. ಅಂತಹ ಕ್ಷಣದಲ್ಲಿ ಮತ್ತೊಮ್ಮೆ ಈ ರೀತಿ ಆಗಲೇಬಾರದು. ಹಾಗೆ ಆಗದೆಂಬ ವಿಶ್ವಾಸ ನನಗಿದೆ. ಇದನ್ನು ಮತ್ತೆ ಕೆದಕಲು ಹೋಗಲಾರೆ’’ ಎಂದು ವಿಲಿಯಮ್ಸನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘‘ಅಮೋಘ ಪ್ರದರ್ಶನ ನೀಡಿರುವ ಇಂಗ್ಲೆಂಡ್‌ಗೆ ಅಭಿನಂದನೆ ಸಲ್ಲಿಸುವೆ. ಪಿಚ್ ನಾವು ನಿರೀಕ್ಷೆ ಮಾಡಿದ್ದಗಿಂತ ವಿಭಿನ್ನವಾಗಿತ್ತು. 300ಕ್ಕೂ ಅಧಿಕ ರನ್ ಹರಿಯಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ನಾವು ಅಷ್ಟೊಂದು ರನ್ ನೋಡಿಲ್ಲ. ಫೈನಲ್‌ಗೆ ತಲುಪುವಂತೆ ಮಾಡಿದ ನಮ್ಮ ತಂಡದ ಎಲ್ಲ ಆಟಗಾರರಿಗೂ ನಾನು ಅಭಿನಂದನೆ ಸಲ್ಲಿಸುವೆ. ಫೈನಲ್ ಪಂದ್ಯ ಟೈ ಆಗಿದೆ. ಇದರಲ್ಲಿ ಹಲವು ಭಾಗವಿದೆ. ಈ ಕ್ಷಣದಲ್ಲಿ ಆಟಗಾರರು ಭಾರೀ ಬೇಸರಗೊಂಡಿದ್ದಾರೆ’’ ಎಂದು ವಿಲಿಯಮ್ಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News