ಬೆನ್ ಸ್ಟೋಕ್ಸ್ ಆಗ ವಿಲನ್, ಈಗ ಹೀರೊ

Update: 2019-07-16 18:28 GMT

ಲಂಡನ್, ಜು.16: ಮೂರು ವರ್ಷಗಳ ಹಿಂದೆ ಇಂಗ್ಲೆಂಡ್ ತಂಡಕ್ಕೆ ಟಿ-20 ವಿಶ್ವಕಪ್ ಕೈತಪ್ಪಿಹೋಗಲು ಕಾರಣವಾಗಿ ವಿಲನ್ ಆಗಿದ್ದ ಬೆನ್ ಸ್ಟೋಕ್ಸ್ ಈಗ ತನ್ನ ತಂಡದ ನಾಲ್ಕು ದಶಕಗಳ ಕನಸನ್ನು ನನಸು ಮಾಡಿ ಹೀರೋವಾಗಿದ್ದಾರೆ. ಕೋಲ್ಕತಾದ ಈಡನ್‌ಗಾರ್ಡನ್ಸ್‌ನಲ್ಲಿ 2016ರಲ್ಲಿ ನಡೆದ ಟಿ-20 ವಿಶ್ವಕಪ್ ಫೈನಲ್‌ನ ಅಂತಿಮ ಓವರ್‌ನಲ್ಲಿ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರ ಬೌಲಿಂಗ್‌ನಲ್ಲಿ ಸತತ 4 ಸಿಕ್ಸರ್‌ಗಳನ್ನು ಸಿಡಿಸಿದ್ದ ಕಾರ್ಲೊಸ್ ಬ್ರಾತ್‌ವೇಟ್ ವೆಸ್ಟ್‌ಇಂಡೀಸ್‌ಗೆ ಅಸಾಮಾನ್ಯ ಗೆಲುವು ತಂದುಕೊಟ್ಟಿದ್ದರು. ಗೆಲುವಿನ ಹಂತದಲ್ಲಿದ್ದ ಇಂಗ್ಲೆಂಡ್‌ನ್ನು ಕಳಪೆ ಬೌಲಿಂಗ್‌ನಿಂದ ಸೋಲಿನ ಕೂಪಕ್ಕೆ ತಳ್ಳಿದ್ದ ಸ್ಟೋಕ್ಸ್‌ಗೆ ಆಘಾತದಿಂದ ಹೊರಬರಲು ಕೆಲವು ಸಮಯ ಹಿಡಿದಿತ್ತು. ಟಿ-20 ವಿಶ್ವಕಪ್ ಫೈನಲ್ ತನ್ನ ಬಾಳಿನ ಅತ್ಯಂತ ಕೆಟ್ಟ ಕ್ಷಣ ಎಂದು ಸ್ಟೋಕ್ಸ್ ಈಗಲೂ ನೆನಪಿಸಿಕೊಳ್ಳುತ್ತಾರೆ.

2017ರಲ್ಲಿ ನಡೆದ ಮತ್ತೊಂದು ಘಟನೆ ಸ್ಟೋಕ್ಸ್ ವೃತ್ತಿಜೀವನಕ್ಕೆ ಸಂಚಕಾರ ತರುವ ಹಂತಕ್ಕೆ ತಲುಪಿಸಿತ್ತು. ಸ್ಟೋಕ್ಸ್ ಬ್ರಿಸ್ಟೋಲ್ ನೈಟ್‌ಕ್ಲಬ್‌ನಲ್ಲಿ ನಡೆದಿದ್ದ ಹೊಡೆದಾಟ ಪ್ರಕರಣದಲ್ಲಿ ಭಾಗಿಯಾದ ಕಾರಣ ಬ್ರಿಸ್ಟೋಲ್ ಕ್ರೌನ್ ಕೋರ್ಟ್‌ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜಗಳವಾಡಿ ಶಾಂತಿಭಂಗ ಉಂಟು ಮಾಡಿದ ಆಪಾದನೆಗೆ ಗುರಿಯಾಗಿದ್ದರು. 2018ರಲ್ಲಿ ನ್ಯಾಯಾಲಯ ಸ್ಟೋಕ್ಸ್ ವಿರುದ್ಧ ಆಪಾದನೆಯನ್ನು ಕೈಬಿಟ್ಟಿತ್ತು.

 ಈ ಘಟನೆಯಿಂದಾಗಿ ಸಾರ್ವಜನಿಕರಿಗೆ ತೀವ್ರ ಟೀಕೆಯನ್ನು ಎದುರಿಸಿದ್ದ ಸ್ಟೋಕ್ಸ್ ಇಂಗ್ಲೆಂಡ್ ತಂಡದಲ್ಲಿ ಉಪ ನಾಯಕನ ಸ್ಥಾನವನ್ನು ಕಳೆದುಕೊಂಡರು. ಅದೇ ವರ್ಷ ಆಸ್ಟ್ರೇಲಿಯದಲ್ಲಿ ನಡೆದಿದ್ದ ಪ್ರತಿಷ್ಠಿತ ಆ್ಯಶಸ್ ಸರಣಿಯಿಂದಲೂ ವಂಚಿತರಾಗಿದ್ದರು. ಕೋಲ್ಕತಾ ಹಾಗೂ ಬ್ರಿಸ್ಟೋಲ್‌ನಲ್ಲಿ ನಡೆದ ಆ ಎರಡು ಕಹಿ ಘಟನೆಯ ನಡುವೆ ಸ್ಟೋಕ್ಸ್ ರವಿವಾರ ಝೀರೋದಿಂದ ಹೀರೋವಾಗಿ ಹೊರಹೊಮ್ಮಿದರು. ಲಾರ್ಡ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಸ್ಟೋಕ್ಸ್ ಕಳೆದ 12 ಆವೃತ್ತಿಗಳಲ್ಲಿ, 44 ವರ್ಷಗಳಿಂದ ನಿರೀಕ್ಷಿಸುತ್ತಿದ್ದ ಇಂಗ್ಲೆಂಡ್‌ನ ವಿಶ್ವಕಪ್ ಕನಸನ್ನು ನನಸಾಗಿಸಿದ್ದರು.

ಐಸಿಸಿ ಸೋಮವಾರ ಪ್ರಕಟಿಸಿದ 2019ರ ವಿಶ್ವಕಪ್ ತಂಡದಲ್ಲಿ ಬಾಂಗ್ಲಾದೇಶದ ಶಾಕಿಬ್ ಅಲ್ ಹಸನ್ ಜೊತೆ ಸ್ಟೋಕ್ಸ್ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರವಿವಾರ ನಡೆದ ಅತ್ಯಂತ ರೋಚಕ ವಿಶ್ವಕಪ್ ಫೈನಲ್‌ನಲ್ಲಿ ಸ್ಟೋಕ್ಸ್ ಔಟಾಗದೆ 84 ರನ್ ಗಳಿಸಿ ಪಂದ್ಯವನ್ನು ಟೈನಲ್ಲಿ ಕೊನೆಗೊಳ್ಳಲು ಕಾರಣರಾದ್ದರು. ಬಳಿಕ ನಡೆದ ಸೂಪರ್‌ಓವರ್‌ನಲ್ಲಿ ಇಂಗ್ಲೆಂಡ್‌ನ ಪರ 8 ರನ್ ಗಳಿಸಿದ್ದರು. ಇಂಗ್ಲೆಂಡ್ ತಂಡ 242 ರನ್ ಗುರಿ ಬೆನ್ನಟ್ಟುವಾಗ ಜೋಸ್ ಬಟ್ಲರ್‌ರೊಂದಿಗೆ 5ನೇ ವಿಕೆಟ್‌ಗೆ 113 ರನ್ ಜೊತೆಯಾಟ ನಡೆಸಿ ಪ್ರತಿಹೋರಾಟ ನೀಡಲು ನೆರವಾಗಿದ್ದರು.

ಫೈನಲ್ ಪಂದ್ಯದಂತೆಯೇ ವಿಶ್ವಕಪ್‌ನ ಇತರ ಪಂದ್ಯಗಳಲ್ಲಿ ಇಂಗ್ಲೆಂಡ್‌ಗೆ ಆಪತ್ತಿನಲ್ಲಿ ಸಿಲುಕಿದಾಗ ಸ್ಟೋಕ್ಸ್ ನೆರವಾಗಿದ್ದರು. ನಿರ್ಣಾಯಕ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದ ಅವರು ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು, ಒಟ್ಟು 11 ಪಂದ್ಯಗಳಲ್ಲಿ 66.42ರ ಸರಾಸರಿಯಲ್ಲಿ ಐದು ಅರ್ಧಶತಕಗಳ ಸಹಿತ ಒಟ್ಟು 465 ರನ್ ಗಳಿಸಿದ್ದರು.

ಎಡಗೈ ದಾಂಡಿಗ ಸ್ಟೋಕ್ಸ್ ಟೂರ್ನಿಯ ಮೊದಲ ಪಂದ್ಯದಲ್ಲಿ 79 ಎಸೆತಗಳಲ್ಲಿ 89 ರನ್ ಸಿಡಿಸಿದ್ದರು. ಭಾರತ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 54 ಎಸೆತಗಳಲ್ಲಿ 79 ರನ್ ಗಳಿಸಿದ್ದ ಸ್ಟೋಕ್ಸ್ ತಂಡಕ್ಕೆ ಆಸರೆಯಾಗಿದ್ದರು.

ಇದೀಗ ಕೋಲ್ಕತಾ ಹಾಗೂ ಬ್ರಿಸ್ಟೋಲ್‌ನಲ್ಲಿ ನಡೆದ ನೋವನ್ನು ಮರೆತಿರುವ ಸ್ಟೋಕ್ಸ್ ತನ್ನ ಕೊರಳಲ್ಲಿ ವಿಶ್ವಕಪ್ ಪದಕವನ್ನು ಧರಿಸಿಕೊಂಡು ಸಂಭ್ರಮಪಟ್ಟರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News