ಭಾರತದ ಮುಖ್ಯ ಕೋಚ್ ಹುದ್ದೆ ಗೆ ಬಿಸಿಸಿಐ ಅರ್ಜಿ ಆಹ್ವಾನ

Update: 2019-07-16 18:45 GMT

ಹೊಸದಿಲ್ಲಿ, ಜು.16: ಭಾರತೀಯ ಕ್ರಿಕೆಟ್ ಮಂಡಳಿ ಮಂಗಳವಾರ ಪುರುಷರ ತಂಡಕ್ಕೆ ಮುಖ್ಯ ಕೋಚ್ ಹಾಗೂ ಸಹಾಯಕ ಸಿಬ್ಬಂದಿಗಾಗಿ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳ ವಯಸ್ಸು 60ಕ್ಕಿಂತ ಹೆಚ್ಚಾಗಿರಬಾರದು ಹಾಗೂ ಕನಿಷ್ಠ ಎರಡು ವರ್ಷ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೆಲಸ ಮಾಡಿದ ಅನುಭವಿಯಾಗಿರಬೇಕೆಂದು ಬಿಸಿಸಿಐ ಮಾನದಂಡ ವಿಧಿಸಿದೆ.

 ಹೆಡ್ ಕೋಚ್, ಬ್ಯಾಟಿಂಗ್, ಬೌಲಿಂಗ್ ಕೋಚ್, ಫೀಲ್ಡಿಂಗ್ ಕೋಚ್, ಫಿಸಿಯೋಥೆರಪಿಸ್ಟ್, ಸ್ಟ್ರೆಂತ್ ಹಾಗೂ ಕಂಡೀಶನಿಂಗ್ ಕೋಚ್ ಹಾಗೂ ಆಡಳಿತಾತ್ಮಕ ಪ್ರಬಂಧಕ ಹುದ್ದೆ ನೇಮಕ ಪ್ರಕ್ರಿಯೆಯನ್ನು ಬಿಸಿಸಿಐ ಆರಂಭಿಸಿದ್ದು, ಜು.30, ಸಂಜೆ 5 ಗಂಟೆಗೆ ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಕೊನೆಯ ಗಡುವಾಗಿದೆ.

2017ರ ಜುಲೈನಲ್ಲಿ ರವಿ ಶಾಸ್ತ್ರಿ ಮುಖ್ಯ ಕೋಚ್ ಆಗಿ ನೇಮಕಗೊಳ್ಳುವ ಮೊದಲು ಬಿಸಿಸಿಐ 9 ಅಂಶಗಳ ಅರ್ಹತಾ ಮಾನದಂಡವನ್ನು ರೂಪಿಸಿತ್ತು. ಆದರೆ, ಅದರಲ್ಲಿ ಸ್ಪಷ್ಟತೆಯಿರಲಿಲ್ಲ. ಈ ಬಾರಿ ಮುಖ್ಯ ಕೋಚ್ ಸಹಿತ ಎಲ್ಲ ಕೋಚಿಂಗ್ ಹುದ್ದೆಗಳಿಗೆ ಮೂರು ಅಂಶಗಳ ಮಾನದಂಡ ವಿಧಿಸಲಾಗಿದೆ.

‘‘ಟೀಮ್ ಇಂಡಿಯಾದ ಈಗಿನ ಕೋಚಿಂಗ್ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ವಯಂ ಆಗಿ ಪ್ರವೇಶ ಪಡೆಯಲಿದ್ದಾರೆ’’ ಎಂದು ಬಿಸಿಸಿಐ ಪ್ರಕಟನೆಯೊಂದರಲ್ಲಿ ಸ್ಪಷ್ಟಪಡಿಸಿದೆ.

ಮುಖ್ಯ ಕೋಚ್‌ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಟೆಸ್ಟ್ ಆಡುವ ದೇಶಕ್ಕೆ ಕನಿಷ್ಠ ಎರಡು ವರ್ಷಗಳು ಅಥವಾ ಅಸೋಸಿಯೇಟ್ ಸದಸ್ಯ ತಂಡ/ ಎ ತಂಡ/ ಐಪಿಎಲ್ ತಂಡಕ್ಕೆ ಮೂರು ವರ್ಷಗಳ ಕಾಲ ಕೋಚಿಂಗ್ ನೀಡಿರಬೇಕು. ಅರ್ಜಿದಾರ 30 ಟೆಸ್ಟ್ ಅಥವಾ 50 ಏಕದಿನ ಪಂದ್ಯಗಳಲ್ಲಿ ಆಡಿರಲೇಬೇಕು.

ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ 10 ಟೆಸ್ಟ್ ಅಥವಾ 25 ಏಕದಿನ ಪಂದ್ಯಗಳನ್ನಾಡಿರಬೇಕು ಹಾಗೂ ವಯಸ್ಸು 60 ವರ್ಷ ಮೀರಿರಬಾರದು.

  ಟೀಮ್ ಇಂಡಿಯಾದಲ್ಲಿ ಈಗ ರವಿ ಶಾಸ್ತ್ರಿ ಪ್ರಧಾನ ಕೋಚ್ ಆಗಿದ್ದು, ಭರತ್ ಅರುಣ್ ಬೌಲಿಂಗ್ ಕೋಚ್, ಸಂಜಯ್ ಬಂಗಾರ್ ಬ್ಯಾಟಿಂಗ್ ಕೋಚ್ ಹಾಗೂ ಆರ್.ಶ್ರೀಧರ್ ಫೀಲ್ಡಿಂಗ್ ಕೋಚ್ ಆಗಿದ್ದಾರೆ. ವಿಶ್ವಕಪ್‌ನ ಬಳಿಕ ಎಲ್ಲ ಕೋಚ್‌ಗಳ ಅವಧಿಯನ್ನು 45 ದಿನಗಳಿಗೆ ವಿಸ್ತರಿಸಲಾಗಿದೆ. ಆ.3ರಿಂದ ಸೆ.3ರ ತನಕ ವೆಸ್ಟ್‌ಇಂಡೀಸ್ ಪ್ರವಾಸದಲ್ಲಿ ಇವರು ಕೋಚಿಂಗ್ ನೀಡಲಿದ್ದಾರೆ.

2017ರಲ್ಲಿ ರವಿ ಶಾಸ್ತ್ರಿ ಅವರು ಅನಿಲ್ ಕುಂಬ್ಳೆ ರಾಜೀನಾಮೆಯಿಂದ ತೆರವಾದ ಸ್ಥಾನವನ್ನು ತುಂಬಿದ್ದರು. 57ರ ಹರೆಯದ ಶಾಸ್ತ್ರಿ 2014ರಿಂದ 2016ರ ತನಕ ಟೀಮ್ ಇಂಡಿಯಾದ ನಿರ್ದೇಶಕರಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News