ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದ ಎಸ್.ರಘುನಂದನ್

Update: 2019-07-17 13:01 GMT

ಬೆಂಗಳೂರು, ಜು.17: ದೇಶದಲ್ಲಿ ಹೆಚ್ಚುತ್ತಿರುವ ಮತಾಂಧತೆ ಹಾಗೂ ಆಹಾರ-ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಗುಂಪು ಹಲ್ಲೆಗಳನ್ನು ವಿರೋಧಿಸಿ 2018ನೆ ಸಾಲಿನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ರಂಗ ನಿರ್ದೇಶಕ ಎಸ್.ರಘುನಂದನ್ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಅಕಾಡೆಮಿಗೆ ಪತ್ರ ಬರೆದಿರುವ ಅವರು, ಸಂಗೀತ ನಾಟಕ ಅಕಾಡೆಮಿ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ತನ್ನ ಸ್ವಾಯತ್ತತೆಯನ್ನು ಬಹಳಮಟ್ಟಿಗೆ ಕಾಪಾಡಿಕೊಂಡು ಬಂದಿದೆ. ಅಂಥ ಅಕಾಡೆಮಿಯು 2018ನೆ ಸಾಲಿನ ತನ್ನ ಪ್ರಶಸ್ತಿಯನ್ನು, ಬೇರೆ ಹಲವರಿಗೆ ನೀಡುವುದರೊಂದಿಗೆ, ನನಗೂ ನೀಡಿದ್ದಕ್ಕಾಗಿ ಅಕಾಡೆಮಿಗೆ ಕೃತಜ್ಞನಾಗಿದ್ದೇನೆ. ಆದರೆ, ಇವತ್ತು ದೇಶದ ಹಲವು ಕಡೆ, ಮತ ಧರ್ಮದ ಹೆಸರಿನಲ್ಲಿ, ತಿನ್ನುವ ಆಹಾರದ ಹೆಸರಿನಲ್ಲಿ ಗುಂಪು ಹಲ್ಲೆಗಳು, ಕಗ್ಗೊಲೆಗಳು ನಡೆಯುತ್ತಿವೆ. ಅಧಿಕಾರದಲ್ಲಿರುವವರು ಇಂಥ ಭೀಕರ ಹಿಂಸಾಚಾರ ಮತ್ತು ಕಗ್ಗೊಲೆಗಳಿಗೆ ಕಾರಣವಾದ ದ್ವೇಷವನ್ನು ತಂತ್ರಜ್ಞಾನದ ಮೂಲಕ ವ್ಯವಸ್ಥಿತವಾಗಿ ಹರಡುತ್ತಾ, ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಶಿಕ್ಷಣದ ಅತ್ಯುನ್ನತ ಸಂಸ್ಥೆಗಳಿಂದ ಮೊದಲುಗೊಂಡು ಕೆಳಮಟ್ಟದ ಶಾಲಾ ಕಾಲೇಜುಗಳವರೆಗೆ, ಎಲ್ಲೆಡೆಯೂ ಮತಾಂಧತೆಯಿಂದ ಕೂಡಿದ ಪಾಠಗಳನ್ನು, ವಿಚಾರಗಳನ್ನು ವಿದ್ಯಾರ್ಥಿಗಳ ತಲೆಗಳಲ್ಲಿ ತುಂಬುವ ಪ್ರಯತ್ನಗಳು ನಡೆಯುತ್ತಿದೆ.

ಭಾರತೀಯತೆ ಮತ್ತು ವಸುಧೈವ ಕುಟುಂಬಕಂ ಅನ್ನುವುದರ ಅರ್ಥವನ್ನೇ ತಿರುಚಲಾಗುತ್ತಿದೆ. ಭಾರತದ ಭವಿಷ್ಯದ ಬೆಳಕಾಗಿರುವ ಕನ್ಹಯ್ಯ ಕುಮಾರ್‌ರಂತಹವರ ಮೇಲೆ ದೇಶದ್ರೋಹದ ಆರೋಪವನ್ನು ಹೊರಿಸಲಾಗಿದೆ. ಶೋಷಿತರು ಮತ್ತು ದಲಿತ ಜನರ ಪರವಾಗಿ ಕೋರ್ಟ್-ಕಚೇರಿಗಳಲ್ಲಿ ವಾದಿಸುವವರ, ಲೇಖನ ಮತ್ತು ಪುಸ್ತಕಗಳನ್ನು ಪ್ರಕಟಿಸುವವರ, ಅಹಿಂಸಾ ಮಾರ್ಗದ ಹೋರಾಟಗಾರರ ವಿರುದ್ಧ ಕೇಂದ್ರ ಸರಕಾರ ದ್ವೇಷಭಾವನೆಯಿಂದ ಮೊಕದ್ದಮೆ ಹೂಡಿ ತೊಂದರೆಗೆ ಈಡುಮಾಡುತ್ತಿದೆ. ನಿಜವಾದ ದೇಶಪ್ರೇಮಿಗಳು, ಲೋಕೋಪಕಾರಿಗಳು, ಧರ್ಮ ಮಾರ್ಗಿಗಳು ಆಗಿರುವ ಮತ್ತು ಸಕಲ ಚರಾಚರಕ್ಕೆ ಲೇಸನ್ನೇ ಬಯಸುವ, ಲೇಸನ್ನೇ ಉಂಟುಮಾಡುವ ಇಂತಹವರಿಗೆ ನನ್ನ ದೇಶದಲ್ಲಿ ಹೀಗೆ ಅನ್ಯಾಯವಾಗುತ್ತಿರುವಾಗ, ರಂಗಭೂಮಿಯ ಕಲಾವಿದನಾಗಿ, ಕವಿ-ನಾಟಕಕಾರನಾಗಿ, ಈ ದೇಶ ಮತ್ತು ಲೋಕದ ಪ್ರಜೆಯಾಗಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸಲಾರೆ.

ಸ್ವೀಕರಿಸಲು ನನ್ನ ಆತ್ಮಸಾಕ್ಷಿ ಒಪ್ಪದು. ಇದು ಪ್ರತಿಭಟನೆಯಲ್ಲ, ವ್ಯಥೆ. ಅಕಾಡೆಮಿಯ ಬಗ್ಗೆ ನನಗೆ ಗೌರವವಿದೆ. ಈ ಹಿಂದೆ ಇಂತಹ ಪ್ರಶಸ್ತಿ ಪಡೆದ ನನ್ನೆಲ್ಲ ಸಹೋದ್ಯೋಗಿಗಳ ಬಗ್ಗೆ ಗೌರವವಿದೆ. ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ಅಕಾಡೆಮಿಯ ಸದಸ್ಯರ ಕ್ಷಮೆಯಾಚಿಸುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News