ಕುಲಭೂಷಣ್ ಪ್ರಕರಣ: ಕಾನೂನು ಸಮರದಲ್ಲಿ ಭಾರತ ಜಯಿಸಿದ್ದು ಹೇಗೆ ಗೊತ್ತೆ?

Update: 2019-07-18 04:26 GMT

ಹೊಸದಿಲ್ಲಿ, ಜು.18: ಪಾಕಿಸ್ತಾನದ ಸೇನಾ ನ್ಯಾಯಾಲಯ ಕುಲಭೂಷಣ್ ಜಾಧವ್ ಅವರಿಗೆ ಮರಣ ದಂಡನೆ ವಿಧಿಸಿ ತೀರ್ಪು ನೀಡಿದಾಗ 2017ರಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗುವುದು ಬಿಟ್ಟರೆ ಯಾವ ಅವಕಾಶವೂ ಇರಲಿಲ್ಲ. ಜಾಧವ್ ಸಾಮಾನ್ಯ ಪ್ರಜೆಯಾಗಿದ್ದು, ಅವರನ್ನು ಸಶಸ್ತ್ರ ಗುಂಪು ಅಪಹರಿಸಿ ಪಾಕಿಸ್ತಾನಕ್ಕೆ ಕರೆದೊಯ್ದಿದೆ. ಬಲೂಚಿಸ್ತಾನದ ಸಮಸ್ಯೆಗಳ ಬಗ್ಗೆ ಭಾರತದ ಮೇಲೆ ಗೂಬೆ ಕೂರಿಸಲು ಪಾಕಿಸ್ತಾನ ಈ ವಿಷಯವನ್ನು ಬಳಸಿಕೊಳ್ಳುತ್ತಿದೆ ಎನ್ನುವುದು ಭಾರತದ ವಾದವಾಗಿತ್ತು.

ಜಾಧವ್ ಅವರಿಗೆ ತಮ್ಮ ಆಯ್ಕೆಯ ಕಾನೂನು ಸಲಹೆಗಾರರ ಮೂಲಕ ಸಮರ್ಥಿಸಿಕೊಳ್ಳುವ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಭಾರತ ಹೇಳಿತ್ತು. ಅವರನ್ನು ಬಂಧನದಲ್ಲಿರಿಸಿ ತಪ್ಪೊಪ್ಪಿಗೆ ಹೇಳಿಕೆ ಬರೆಸಿಕೊಂಡು ಈ ಆಧಾರದಲ್ಲಿ ಅವರಿಗೆ ಮರಣ ದಂಡನೆ ವಿಧಿಸಲಾಗಿತ್ತು ಎಂದು ಭಾರತ ಪ್ರತಿಪಾದಿಸಿತ್ತು.

ರಾಜತಾಂತ್ರಿಕ ಸಂಬಂಧ ಕುರಿತ ವಿಯೆನ್ನಾ ಒಪ್ಪಂದದ 36(1)(ಬಿ) ವಿಧಿಯನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂಬ ಆಧಾರದಲ್ಲಿ ಭಾರತ ತನ್ನ ವಾದ ಮಂಡಿಸಿತ್ತು. ಇದರ ಅನ್ವಯ, ಭಾರತೀಯ ಪ್ರಜೆಯನ್ನು ಬಂಧಿಸಿದ ಬಗ್ಗೆ ಪಾಕಿಸ್ತಾನ ತಕ್ಷಣ ಭಾರತಕ್ಕೆ ಮಾಹಿತಿ ನೀಡಬೇಕಿತ್ತು.

ಜಾಧವ್ ಅವರನ್ನು 2016ರ ಮಾರ್ಚ್ 3ರಂದು ಬಂಧಿಸಲಾಗಿದೆ ಎಂದು ಪಾಕಿಸ್ತಾನ ಘೋಷಿಸಿತ್ತು. ಆದರೆ 2016ರ ಮಾರ್ಚ್ 25ರಂದು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಭಾರತೀಯ ಹೈಕಮಿಷನ್‌ಗೆ ಈ ಮಾಹಿತಿ ನೀಡಿದ್ದರು. ಜಾಧವ್ ಬಂಧನದ ವಿಷಯವನ್ನು ಮೂರು ವಾರದಷ್ಟು ವಿಳಂಬ ಮಾಡಿ ಏಕೆ ಭಾರತಕ್ಕೆ ತಿಳಿಸಲಾಗಿದೆ ಎಂಬ ಬಗ್ಗೆ ಪಾಕಿಸ್ತಾನ ಯಾವ ವಿವರಣೆಯನ್ನೂ ನೀಡಿಲ್ಲ ಎನ್ನುವುದು ಭಾರತದ ವಾದ. ಈ ಮೂಲಕ ಭಾರತೀಯ ಅಧಿಕಾರಿಗಳು ಜಾಧವ್ ಅವರನ್ನು ಭೇಟಿ ಮಾಡುವ ಅವಕಾಶ ತಪ್ಪಿತ್ತು. ಇದು ವಿಯೆನ್ನಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ.

ಜತೆಗೆ ಜಾಧವ್ ತಪ್ಪೊಪ್ಪಿಗೆ ಹೇಳಿಕೆಯ ಆಧಾರದಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು. ಆದರೆ ಜಾಧವ್‌ಗೆ ತಮ್ಮ ಪರ ವಾದ ಮಂಡಿಸಲು ಸೂಕ್ತ ಕಾನೂನಾತ್ಮಕ ಅವಕಾಶ ನೀಡಲಿಲ್ಲ ಎಂದೂ ಭಾರತೀಯ ಅಧಿಕಾರಿಗಳು ಹೇಳಿದ್ದರು. ವಿಯೆನ್ನಾ ಒಪ್ಪಂದ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಇದು ಪಾಕಿಸ್ತಾನದ ಕಡೆಯಿಂದ ಆಗಿರುವ ಲೋಪ. 2008ರಲ್ಲಿ ಮಾಡಿಕೊಂಡಿರುವ ದ್ವಿಪಕ್ಷೀಯ ಒಪ್ಪಂದವು ವಿಯೆನ್ನಾ ಒಪ್ಪಂದವನ್ನು ಮೀರಿದ್ದು ಎಂಬ ವಾದವನ್ನು ಪಾಕಿಸ್ತಾನ ಮುಂದಿಟ್ಟಿತ್ತು.

ಇದು ಬೇಹುಗಾರಿಕೆ ಪ್ರಕರಣವಾಗಿರುವುದರಿಂದ ವಿಯೆನ್ನಾ ಒಪ್ಪಂದದ ಪ್ರಕಾರ ಆರೋಪಿಗೆ ಸಮರ್ಥಿಸಿಕೊಳ್ಳಲು ಅವಕಾಶ ನೀಡಬೇಕಿಲ್ಲ ಎಂಬ ಪಾಕಿಸ್ತಾನದ ವಾದವನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಮನ್ನಿಸದೇ ಇರುವುದರಿಂದ ಭಾರತಕ್ಕೆ ಜಯ ಸಾಧ್ಯವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News