2019-20ರಲ್ಲಿ ಸ್ವದೇಶದಲ್ಲಿ ಬಿಡುವಿಲ್ಲದ ಕ್ರಿಕೆಟ್ ಆಡಲಿರುವ ಟೀಮ್ ಇಂಡಿಯಾ

Update: 2019-07-18 05:52 GMT

ಹೊಸದಿಲ್ಲಿ, ಜು.18: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಹಾಗೂ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾಗವಹಿಸುವುದರೊಂದಿಗೆ ನಾಲ್ಕು ತಿಂಗಳ ಕಾಲ ಸತತ ಕ್ರಿಕೆಟ್ ಆಡಿರುವ ಟೀಮ್ ಇಂಡಿಯಾ ಮತ್ತೊಂದು ವಿದೇಶಿ ಪ್ರವಾಸಕ್ಕೆ ಸಜ್ಜಾಗಿದ್ದು, ಶೀಘ್ರವೇ ವೆಸ್ಟ್‌ಇಂಡೀಸ್‌ಗೆ ಪ್ರಯಾಣ ಬೆಳೆಸಲಿದೆ.

ಮುಂಬರುವ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡ ಬಲಿಷ್ಠ ಹಾಗೂ ದುರ್ಬಲ ತಂಡಗಳೆದರು ಸ್ವದೇಶದಲ್ಲಿ ಸತತ ಸರಣಿಗಳನ್ನಾಡಲಿದೆ. ಕೆರಿಬಿಯನ್ ಪ್ರವಾಸ ಮುಗಿಸಿ ಸ್ವದೇಶಕ್ಕೆ ವಾಪಸಾದ ಬಳಿಕ ಭಾರತ 2020ರ ಫೆಬ್ರವರಿಯಲ್ಲಿ ನ್ಯೂಝಿಲ್ಯಾಂಡ್ ಪ್ರವಾಸ ಕೈಗೊಳ್ಳುತ್ತದೆ.

ಭಾರತ ಸ್ವದೇಶಿ ಸರಣಿಯಲ್ಲಿ ಒಟ್ಟು 5 ಟೆಸ್ಟ್, 9 ಏಕದಿನ ಅಂತರ್‌ರಾಷ್ಟ್ರೀಯ ಸರಣಿ ಹಾಗೂ 12 ಟಿ-20 ಅಂತರ್‌ರಾಷ್ಟ್ರೀಯ ಸರಣಿಗಳನ್ನಾಡಲಿದೆ.

ದಕ್ಷಿಣ ಆಫ್ರಿಕ ವಿರುದ್ಧ 3 ಟಿ-20 ಅಂತರ್‌ರಾಷ್ಟ್ರೀಯ ಸರಣಿಯನ್ನು ಆಡುವುದರೊಂದಿಗೆ 2019-20ರ ಸ್ವದೇಶಿ ಋತುವಿಗೆ ಭಾರತೀಯ ತಂಡ ಚಾಲನೆ ನೀಡಲಿದೆ.

ಆ ಬಳಿಕ ಸೆಪ್ಟಂಬರ್-ಅಕ್ಟೋಬರ್-2019ರಲ್ಲಿ ಗಾಂಧಿ-ಮಂಡೇಲ ಟೆಸ್ಟ್ ಸರಣಿಯು ಭಾರತ ಹಾಗೂ ದ.ಆಫ್ರಿಕ ಮಧ್ಯೆ ನಡೆಯುತ್ತದೆ.

ನವೆಂಬರ್‌ನಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಬಾಂಗ್ಲಾದೇಶ 3 ಟಿ-20 ಹಾಗೂ 2 ಟೆಸ್ಟ್ ಸರಣಿಯನ್ನಾಡಲಿದೆ. ವೆಸ್ಟ್‌ಇಂಡೀಸ್ ತಂಡ ಡಿಸೆಂಬರ್‌ನಲ್ಲಿ ಭಾರತಕ್ಕೆ ಪ್ರವಾಸ ಆರಂಭಿಸಲಿದ್ದು, 3 ಟಿ-20 ಹಾಗೂ 3 ಏಕದಿನ ಸರಣಿಯನ್ನು ಆಡಲಿದೆ. 2020ರ ಜನವರಿಯಲ್ಲಿ ಝಿಂಬಾಬ್ವೆ 3 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಆಡಲು ಭಾರತಕ್ಕೆ ಬರಲಿದೆ. ಜನವರಿಯಲ್ಲಿ ಆಸ್ಟ್ರೇಲಿಯ ತಂಡ ಕೂಡ 3 ಪಂದ್ಯಗಳ ಏಕದಿನ ಸರಣಿ ಆಡಲು ಭಾರತಕ್ಕೆ ಕಾಲಿಡಲಿದೆ.

ಜ.24 ರಿಂದ ನ್ಯೂಝಿಲ್ಯಾಂಡ್‌ಗೆ ಪ್ರವಾಸ ಆರಂಭಿಸಲಿರುವ ಭಾರತ 5 ಟಿ-20, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ.

2020ರ ಮಾರ್ಚ್‌ಗೆ ದಕ್ಷಿಣ ಆಫ್ರಿಕ ತಂಡ ಭಾರತಕ್ಕೆ ಆಗಮಿಸಲಿದ್ದು, 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News