ವಿಶ್ವಕಪ್ ಸೂಪರ್ ಓವರ್ ವೇಳೆ ಕೊನೆಯುಸಿರೆಳೆದ ನೀಶಾಮ್ ಬಾಲ್ಯದ ಕೋಚ್!

Update: 2019-07-18 10:38 GMT

ವೆಲ್ಲಿಂಗ್ಟನ್, ಜು.18: ಆಕ್ಲಂಡ್ ಗ್ರಾಮರ್ ಸ್ಕೂಲ್‌ನ ಮಾಜಿ ಶಿಕ್ಷಕ ಹಾಗೂ ಕೋಚ್ ಡೇವ್ ಜೇಮ್ಸ್ ಗಾರ್ಡನ್ ಇಂಗ್ಲೆಂಡ್ ವಿರುದ್ಧ ರವಿವಾರ ರೋಚಕವಾಗಿ ಸಾಗಿದ ವಿಶ್ವಕಪ್ ಫೈನಲ್‌ನ ಸೂಪರ್ ಓವರ್‌ನಲ್ಲಿ ನ್ಯೂಝಿಲ್ಯಾಂಡ್ ಆಲ್‌ರೌಂಡರ್ ಜಿಮ್ಮಿ ನೀಶಾಮ್  ಭರ್ಜರಿ ಸಿಕ್ಸರ್ ಸಿಡಿಸಿದ ಬೆನ್ನಿಗೇ ಕೊನೆಯುಸಿರೆಳೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

 ಜು.14 ರಂದು ಲಾರ್ಡ್ಸ್ ಮೈದಾನದಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಗರಿಷ್ಠ ಬೌಂಡರಿಗಳಿಸಿದ ಆಧಾರದಲ್ಲಿ ಇಂಗ್ಲೆಂಡ್ ತಂಡ ನ್ಯೂಝಿಲ್ಯಾಂಡ್‌ನ್ನು ಮಣಿಸಿ ಚೊಚ್ಚಲ ವಿಶ್ವಕಪ್ ಜಯಿಸಿತ್ತು. 50 ಓವರ್‌ಗಳ ಪಂದ್ಯ ಹಾಗೂ ಸೂಪರ್ ಓವರ್ ಪಂದ್ಯ ಟೈನಲ್ಲಿ ಕೊನೆಯಾದಾಗ ಬೌಂಡರಿಯನ್ನು ಲೆಕ್ಕ ಹಾಕಲಾಗಿತ್ತು. ಹೀಗಾಗಿ ಕಿವೀಸ್‌ಗೆ ವಿಶ್ವಕಪ್ ಕೈತಪ್ಪಿಹೋಗಿತ್ತು.

‘‘ಸೋಮವಾರ ರಾತ್ರಿ(ನ್ಯೂಝಿಲ್ಯಾಂಡ್)ಸೂಪರ್ ಓವರ್‌ನ 2ನೇ ಎಸೆತದಲ್ಲಿ ನೀಶಾಮ್ ಸಿಕ್ಸರ್ ಸಿಡಿಸಿದ ಕೆಲವೇ ಕ್ಷಣದಲ್ಲಿ ನನ್ನ ತಂದೆ ಕೊನೆಯುಸಿರೆಳೆದರು’’ ಎಂದು ಗಾರ್ಡನ್ ಅವರ ಪುತ್ರಿ ಲಿಯೊನಿ ಹೇಳಿದ್ದಾರೆ.

‘‘ಡೇವ್ ಗಾರ್ಡನ್ ನನ್ನ ಹೈಸ್ಕೂಲ್ ಶಿಕ್ಷಕ, ಕೋಚ್ ಹಾಗೂ ಸ್ನೇಹಿತರಾಗಿದ್ದರು. ಕ್ರಿಕೆಟ್ ಮೇಲಿನ ಅವರ ಪ್ರೀತಿ ಅಪಾರ. ಅವರ ಆತ್ಮಕ್ಕೆ ಶಾಂತಿ ಸಿಗಲಿ’’ ಎಂದು ಟ್ವಿಟರ್‌ನ ಮೂಲಕ ತನ್ನ ಕೋಚ್‌ಗೆ ನೀಶಾಮ್ ಶ್ರದ್ದಾಂಜಲಿ ಸಲ್ಲಿಸಿದರು.

ಆಕ್ಲಂಡ್ ಗ್ರಾಮರ್ ಹೈಸ್ಕೂಲ್‌ನಲ್ಲಿ 25 ವರ್ಷಗಳ ಕಾಲ ಶಿಕ್ಷಕರಾಗಿ, ಕ್ರಿಕೆಟ್ ಹಾಗೂ ಹಾಕಿ ಕೋಚ್ ಆಗಿದ್ದ ಗಾರ್ಡನ್ ಅವರು ನೀಶಾಮ್, ಲಾಕಿ ಫರ್ಗ್ಯುಸನ್ ಹಾಗೂ ಇತರ ಹಲವು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕೋಚ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News