ಸರಬ್‌ಜೋತ್ ಸಿಂಗ್‌ಗೆ ಸ್ವರ್ಣ

Update: 2019-07-19 05:06 GMT

ಬರ್ಲಿನ್, ಜು.18: ಜರ್ಮನಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿದೆ. ಸರಬ್‌ಜೋತ್ ಸಿಂಗ್ ಪುರುಷರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಬಾಚಿಕೊಂಡರು.

ಗುರುವಾರ ನಡೆದ ಸ್ಪರ್ಧೆಯಲ್ಲಿ ಸರಬ್‌ಜೋತ್ 239.6 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು. ಈ ಮೂಲಕ ಭಾರತಕ್ಕೆ ಟೂರ್ನಿಯಲ್ಲಿ 9ನೇ ಚಿನ್ನ ಗೆದ್ದುಕೊಟ್ಟರು.

ಸರಬ್‌ಜೋತ್ ಸಾಹಸದಿಂದ ಭಾರತ 10 ಮೀ. ಏರ್ ಪಿಸ್ತೂಲ್‌ನ ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಚಿನ್ನ ಜಯಿಸಿದ ಸಾಧನೆ ಮಾಡಿದೆ. 14ರ ಹರೆಯದ ಇಶಾ ಸಿಂಗ್ ಬುಧವಾರ ಮಹಿಳೆಯರ ಇವೆಂಟ್‌ನಲ್ಲಿ ಚಿನ್ನ ಜಯಿಸಿದ್ದರು.

 ಕಳೆದ ಆರು ದಿನಗಳಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ಇನ್ನೂ ಒಂದು ದಿನದ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಭಾರತ 9 ಚಿನ್ನ, 9 ಬೆಳ್ಳಿ ಹಾಗೂ 4 ಕಂಚು ಸಹಿತ ಒಟ್ಟು 22 ಪದಕಗಳನ್ನು ಜಯಿಸಿ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ.

ಭಾರತಕ್ಕೆ ತೀವ್ರ ಪೈಪೋಟಿ ಒಡ್ಡುತ್ತಿರುವ ಚೀನಾ 7 ಚಿನ್ನ, 7 ಬೆಳ್ಳಿ ಹಾಗೂ 6 ಕಂಚು ಸಹಿತ ಒಟ್ಟು 20 ಪದಕಗಳನ್ನು ಜಯಿಸಿ 2ನೇ ಸ್ಥಾನದಲ್ಲಿದೆ.

ಸರಬ್‌ಜೋತ್ ಈ ವಷಾರಂಭದಲ್ಲಿ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಅರ್ಹತಾ ಸುತ್ತಿನಲ್ಲಿ 575 ಅಂಕ ಗಳಿಸಿ 5ನೇ ಸ್ಥಾನದೊಂದಿಗೆ ಫೈನಲ್‌ಗೆ ತಲುಪಿದ ಭಾರತದ ಏಕೈಕ ಶೂಟರ್ ಆಗಿದ್ದರು.

8 ಶೂಟರ್‌ಗಳಿದ್ದ ಫೈನಲ್‌ನಲಿ 17ರ ಹರೆಯದ ಸರಬ್‌ಜೋತ್ ಮಂದಗತಿಯ ಆರಂಭ ಪಡೆದಿದ್ದರು. ಆರಂಭದಲ್ಲಿ 3ನೇ ಹಾಗೂ 4ನೇ ಸ್ಥಾನದಲ್ಲಿದ್ದ ಅವರು ಏಳನೇ ಶಾಟ್‌ನಲ್ಲಿ ವೇಗವಗಿ ಆಡತೊಡಗಿದರು. ಸರಬ್‌ಜೋತ್‌ಗೆ ಚೀನಾ ಎದುರಾಳಿಗಳು ಕಠಿಣ ಸ್ಪರ್ಧೆಯೊಡ್ಡಿದರು. ಚೀನಾದ ಶೂಟರ್‌ಗಳು ಬೆಳ್ಳಿ ಹಾಗೂ ಕಂಚಿನ ಪದಕವನ್ನು ಜಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News