ವಿಶ್ವನಾಥ್ ತನ್ನ ಸಾಲ ತೀರಿಸಲು ಬಿಜೆಪಿಗೆ ಸೇಲ್ ಆಗಿದ್ದಾರೆ: ಸಾ.ರಾ. ಮಹೇಶ್ ಗಂಭೀರ ಆರೋಪ

Update: 2019-07-19 09:33 GMT

ಬೆಂಗಳೂರು, ಜು.19: ಹಿರಿಯ ರಾಜಕಾರಣಿ, ಮಾಜಿ ಜೆಡಿಎಸ್ ರಾಜ್ಯಾಧ್ಯಕ್ಷ ಎಎಚ್ ವಿಶ್ವನಾಥ್ ವಿರುದ್ಧ ಸಚಿವ ಸಾ.ರಾ. ಮಹೇಶ್ ಇಂದು ವಿಧಾನಸಭೆಯಲ್ಲಿ ತನ್ನ ಸಾಲ ತೀರಿಸಿಕೊಳ್ಳಲು ಬಿಜೆಪಿಗೆ ಮಾರಾಟವಾಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

‘‘ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದವರು ನನ್ನ ಮೇಲೆ ಆರೋಪ ಮಾಡಿ ರಾಜೀನಾಮೆಗೆ ನಾನೇ ಕಾರಣ ಎಂದಿದ್ದಾರೆ. 4 ತಿಂಗಳ ಮುಂಚೆ ಅವರೇ ಮಾಧ್ಯಮಗಳಿಗೆ ಹೇಳಿಕೆಯೊಂದನ್ನು ನೀಡಿದ್ದರು. ಅದನ್ನು ಸದನದ ಮುಂದೆ ಓದಿ ಹೇಳಲು ಇಚ್ಛಿಸುತ್ತೇನೆ. ಅವರು ಹೀಗೆ ಹೇಳಿದ್ದರು.‘ಪ್ರತಿ ಪಕ್ಷಗಳಿಗೆ ಅಧಿಕಾರ ಹಿಡಿಯುವ ಕಾತುರ ಸಾಮಾನ್ಯ. ಆದರೆ, ಅಧಿಕಾರಕ್ಕಾಗಿ ವಾಮಮಾರ್ಗ ಹಿಡಿಯುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರನ್ನು ಕೊಳ್ಳುವುದು ಮಾರಕ’ ಎಂದಿದ್ದರು, ಎಂದು ಮಹೇಶ್ ಸದನಕ್ಕೆ ತಿಳಿಸಿದರು.

  ಈ ರೀತಿ ಮಾತನಾಡಿದ್ದ ಅವರು ನನ್ನ ಮೇಲೆ ಗಂಭೀರ ಆರೋಪ ಮಾಡಿದಾಗ, ಅವರನ್ನು ನನ್ನ ತೋಟದ ಮನೆಗೆ ಕರೆಸಿದ್ದೆ. ಮಂತ್ರಿಯಾಗುವ ಇಚ್ಛೆ ಇದೆಯಾ ಎಂದು ಪ್ರಶ್ನಿಸಿದ್ದೆ. ಅದಕ್ಕೆ ಅವರು ಇಲ್ಲ, ಮಂತ್ರಿಯಾಗುವ ಬಯಕೆಯಿಲ್ಲ ಎಂದಿದ್ದರು. ಅದಕ್ಕೆ ನಾನು ಏನು ಬೇಕು ಹೇಳಿ ಎಂದು ಕೇಳಿದ್ದೆ. ಅದಕ್ಕೆ ಅವರು ಚುನಾವಣೆಯ ವೇಳೆ ಸಾಲ ಮಾಡಿಕೊಂಡಿದ್ದೇನೆ. 28 ಕೋ.ರೂ. ಸಾಲ ತೀರಿಸಬೇಕು. ಈಗ ಸಮಸ್ಯೆಯಲ್ಲಿ ಸಿಲುಕಿದ್ದೇನೆ. ಬಿಜೆಪಿಯವರು ನನ್ನನ್ನು ಸಂಪರ್ಕಿಸಿದ್ದಾರೆ. ದುಡ್ಡು ಕೊಡಲು ಒಪ್ಪಿಕೊಂಡಿದ್ದಾರೆ. ಆದರೆ, ದೇವೇಗೌಡರು ನನ್ನನ್ನು ನಂಬಿ ಜವಾಬ್ದಾರಿ ನೀಡಿದ್ದಾರೆ. ನಾನು ಪಕ್ಷ ಬಿಟ್ಟು ಹೋಗುವುದಿಲ್ಲ. ಸಾಲ ತೀರಿಸಲು ಏನಾದರೂ ಮಾಡಿ ಎಂದಿದ್ದರು. ಅದಕ್ಕೆ ನನ್ನ ಬಳಿ ಹಣವಿಲ್ಲ. ದುಡಿದ ಹಣದಲ್ಲೇ ತಿಂಗಳಿಗೆ ಇಷ್ಟು ಎಂಬಂತೆ ನಿಮ್ಮ ಸಾಲ ತೀರಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದೆ. ನಂತರ ನಾನು ಅಮೆರಿಕಾಗೆ ಹೋಗಿದ್ದಾಗ, ಅವರಿಗೆ ಕರೆ ಮಾಡಿ ಈ ತಿಂಗಳ ಹಣ ಯಾರಿಗೆ ತಲುಪಿಸಬೇಕೆಂದು ಹೇಳಿ ಎಂದಿದ್ದೆ. ಅದಕ್ಕವರು ಬರುತ್ತೇನೆ ಎಂದಿದ್ದರು. ಅದಾದ ನಂತರ ನನ್ನ ಮೇಲೆ ವೈಯಕ್ತಿಕ ವಾಗ್ದಾಳಿ ನಡೆಸಿದ್ದಾರೆ. ಅವರು ಹಣ ಪಡೆದು ಮುಂಬೈಗೆ ಹೋಗಿರುವುದು ಸ್ಪಷ್ಟ. ನನ್ನ ಮೇಲೆ ಸುಳ್ಳು ಆರೋಪ ಮಾಡಿದಾಗಲೇ ಈ ವಿಚಾರ ಅರಿವಿಗೆ ಬಂತು. ವಿಶ್ವನಾಥ್‌ರನ್ನು ಇಲ್ಲಿಗೆ ಕರೆಸಿ, ನಾನು ಹೇಳಿರುವುದು ಸುಳ್ಳು ಎಂದು ಸಾಬೀತುಪಡಿಸಲಿ ಎಂದು ಮಹೇಶ್ ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News