ಸೋನಭದ್ರಾ ಹತ್ಯಾಕಾಂಡ: 29 ಆರೋಪಿಗಳ ಬಂಧನ

Update: 2019-07-19 18:05 GMT

ಲಕ್ನೋ,ಜು.19: ಸೋನಭದ್ರಾ ಘರ್ಷಣೆಗಳಲ್ಲಿ ಕೊಲ್ಲಲ್ಪಟ್ಟವರಿಗೆ ನ್ಯಾಯವನ್ನು ಒದಗಿಸಲಾಗುವುದು ಎಂದು ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಭರವಸೆ ನೀಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು,ಘಟನೆಗೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ ಮತ್ತು ವೃತ್ತ ಪೊಲೀಸ್ ನಿರೀಕ್ಷಕ ಸೇರಿದಂತೆ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಹಾಗೂ 29 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಘಟನೆಯ ಕುರಿತು ವಿಚಾರಣೆ ನಡೆಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಕಂದಾಯ) ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು,ಅದು 10 ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದರು.

ಬುಧವಾರ ಸೋನಭದ್ರಾ ಜಿಲ್ಲೆಯ ಘೋರಾವಲ್ ಪ್ರದೇಶದಲ್ಲಿ 90 ಬಿಘಾ ವಿವಾದಿತ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವ ಗ್ರಾಮದ ಮುಖ್ಯಸ್ಥ ಮತ್ತು ಆತನ ಬೆಂಬಲಿಗರ ಪ್ರಯತ್ನವನ್ನು ಗ್ರಾಮಸ್ಥರು ವಿರೋಧಿಸಿದ್ದು,ಈ ಸಂದರ್ಭದಲ್ಲಿ 10 ಜನರು ಗುಂಡೇಟಿಗೆ ಬಲಿಯಾಗಿದ್ದರು ಮತ್ತು 28 ಜನರು ಗಾಯಗೊಂಡಿದ್ದರು.

ಹಿಂದಿನಿಂದಲೂ ಎರಡು ಬಣಗಳ ನಡುವೆ ವಿವಾದ ಮತ್ತು ಶಾಂತಿಭಂಗವುಂಟಾಗುವ ಆತಂಕವಿದ್ದರೂ ಅಧಿಕಾರಿಗಳು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲ. ಜು.17ರಂದು ರಚಿಸಲಾದ ವಿಂಧ್ಯಾಚಲ ವಿಭಾಗಾಧಿಕಾರಿ ಮತ್ತು ವಾರಣಾಸಿ ವಲಯದ ಹೆಚ್ಚುವರಿ ಮಹಾ ನಿರ್ದೇಶಕರನ್ನೊಳಗೊಂಡ ದ್ವಿಸದಸ್ಯ ತನಿಖಾ ಸಮಿತಿಯ ಶಿಫಾರಸಿನಂತೆ ಉಪವಿಭಾಗಾಧಿಕಾರಿ ಮತ್ತು ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ಘರ್ಷಣೆಗಳಿಗೆ ಕಾರಣವಾಗಿದ್ದ ಭೂ ವಿವಾದವು 1955ರಿಂದಲೂ ನಡೆಯುತ್ತಿದ್ದು,ಉಭಯ ಬಣಗಳು ದಾಖಲಿಸಿರುವ ಹಲವಾರು ಪ್ರಕರಣಗಳು ರೆವಿನ್ಯೂ ನ್ಯಾಯಾಲಯಗಳು ಮತ್ತು ಕ್ರಿಮಿನಲ್ ನ್ಯಾಯಾಲಯಗಳಲ್ಲಿ ಬಾಕಿಯಿವೆ. ಸಂತ್ರಸ್ತರು ಹಲವಾರು ವರ್ಷಗಳಿಂದಲೂ ವಿವಾದಿತ ಭೂಮಿಯಲ್ಲಿ ಕೃಷಿಯನ್ನು ಮಾಡುತ್ತಿದ್ದರು,ಆದರೆ ಅವರ ಹೆಸರುಗಳು ಕಂದಾಯ ಇಲಾಖೆಯ ದಾಖಲೆಗಳಲ್ಲಿ ಸೇರ್ಪಡೆಗೊಂಡಿರಲಿಲ್ಲ. ಆರೋಪಿಗಳು ಸದ್ರಿ ಭೂಮಿಯನ್ನು ವಶಪಡಿಸಿಕೊಳ್ಳಲು ತೆರಳಿದ್ದು ಘರ್ಷಣೆಗಳಿಗೆ ಕಾರಣವಾಗಿತ್ತು ಎಂದು ಆದಿತ್ಯನಾಥ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News