​ನಾವು ಋಷಿಗಳ ಮಕ್ಕಳು: ಲೋಕಸಭೆಯಲ್ಲಿ ವಾಗ್ವಾದಕ್ಕೆ ಕಾರಣವಾದ ಮಾಜಿ ಬಿಜೆಪಿ ಸಚಿವರ ಹೇಳಿಕೆ

Update: 2019-07-20 04:21 GMT

ಹೊಸದಿಲ್ಲಿ, ಜು.20: ಡಾರ್ವಿನ್ ವಿಕಾಸವಾದದ ಬಗ್ಗೆ ಸಂಶಯ ವ್ಯಕ್ತಪಡಿಸಿ, "ಮಂಗನಿಂದ ಮಾನವನಲ್ಲ; ಭಾರತೀಯರಾದ ನಾವು ಋಷಿಗಳ ಮಕ್ಕಳು" ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಸತ್ಯಪಾಲ್ ಸಿಂಗ್ ನೀಡಿದ ಹೇಳಿಕೆ ಲೋಕಸಭೆಯಲ್ಲಿ ವಾಗ್ವಾದಕ್ಕೆ ಕಾರಣವಾಯಿತು.

ಸಿಂಗ್ ಅವರ ವೈಜ್ಞಾನಿಕ ಮನೋಭಾವವನ್ನು ಪ್ರಶ್ನಿಸಿದ ವಿರೋಧ ಪಕ್ಷಗಳ ಸದಸ್ಯರು ಮಾಜಿ ಸಚಿವರ ಹೇಳಿಕೆ ವಿರುದ್ಧ ಗದ್ದಲ ಎಬ್ಬಿಸಿದರು. ಮಹೂವಾ ಮೊಹಿತ್ರ ಮತ್ತು ಕನಿಮೋಳಿಯಂಥ ಸದಸ್ಯರು ಸಿಂಗ್ ಹೇಳಿಕೆಯ ವೈಜ್ಞಾನಿಕತೆಯನ್ನು ಪ್ರಶ್ನಿಸಿದರು. ಮಾನವ ಹಕ್ಕುಗಳ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯ ಚರ್ಚೆ ವೇಳೆ ಸಿಂಗ್ ಈ ಹೇಳಿಕೆ ನೀಡಿದ್ದರು.

"ಭಾರತೀಯ ಸಂಸ್ಕೃತಿ ಮಾನವ ಹಕ್ಕುಗಳಿಗೆ ಮಹತ್ವ ನೀಡಿಲ್ಲ; ಮಾನವ ಹಕ್ಕುಗಳ ಹೋರಾಟಗಾರರು ಎಂಬ ಪರಿಕಲ್ಪನೆಯೇ ಇರಲಿಲ್ಲ. ನಾವು ಋಷಿಗಳ ಮಕ್ಕಳು ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ನಾವು ವಾನರ ಮಕ್ಕಳು ಎಂದು ಹೇಳುವ ಜನರ ಬಗ್ಗೆ ನಮ್ಮ ಆಕ್ಷೇಪವಿದೆ" ಎಂದು ಹಿಂದಿನ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಸಿಂಗ್ ವಿವರಿಸಿದರು.

ಮಾನವಹಕ್ಕುಗಳ ಹೋರಾಟಗಾರರು ಮತ್ತು ಸರ್ಕಾರೇತರ ಸಂಸ್ಥೆಗಳು ವಿದೇಶಿ ಸಂಘಟನೆಗಳಿಂದ ಹಣ ಪಡೆದು ಭಯೋತ್ಪಾದಕರು, ದೇಶವಿರೋಧಿಗಳು ಹಾಗೂ ಅತ್ಯಾಚಾರಿಗಳನ್ನು ಬೆಂಬಲಿಸುತ್ತಿವೆ ಎಂಬ ಗಂಭೀರ ಆರೋಪ ಮಾಡಿದರು.

ಸಚಿವರ ಹೇಳಿಕೆಯನ್ನು ಆಕ್ಷೇಪಿಸಿದ ಡಿಎಂಕೆ ಸದಸ್ಯೆ ಕನಿಮೋಳಿ, "ಮಾನವ ಹಕ್ಕುಗಳ ರಕ್ಷಣೆಗೆ ವೈಜ್ಞಾನಿಕ ಮನೋಭಾವ ಅಗತ್ಯ; ನಾವು ಹೋಮೊಸೆಪಿಯನ್ಸ್; ಈ ಸದನ ವೈಜ್ಞಾನಿಕ ಮನೋಭಾವಕ್ಕೆ ಮನ್ನಣೆ ನೀಡಬೇಕು" ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News