Breaking News - ದಿಲ್ಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನಿಧನ

Update: 2019-07-20 15:27 GMT

ಹೊಸದಿಲ್ಲಿ,ಜು.20: ಮೂರು ಬಾರಿ ದಿಲ್ಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ (81) ಅವರು ಶನಿವಾರ ಇಲ್ಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.

ಕೇರಳದ ಮಾಜಿ ರಾಜ್ಯಪಾಲರು ಮತ್ತು ದಿಲ್ಲಿ ಕಾಂಗ್ರೆಸ್ ಅಧ್ಯಕ್ಷೆಯೂ ಆಗಿದ್ದ ದೀಕ್ಷಿತ್ ಇತ್ತೀಚಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಈಶಾನ್ಯ ದಿಲ್ಲಿ ಲೋಕಸಭಾ ಕ್ಷೇತ್ರದಿಂದ ವಿಫಲ ಸ್ಪರ್ಧೆ ನಡೆಸುವ ಮೂಲಕ ಚುನಾವಣಾ ರಾಜಕೀಯಕ್ಕೆ ಮರಳಿದ್ದರು.

‘‘ಶೀಲಾ ದೀಕ್ಷಿತ್‌ಜಿ ಅವರ ನಿಧನವು ತೀವ್ರ ಶೋಕವನ್ನುಂಟು ಮಾಡಿದೆ. ಆತ್ಮೀಯ ಮತ್ತು ಒಳ್ಳೆಯ ವ್ಯಕ್ತಿತ್ವದ ಅವರು ದಿಲ್ಲಿಯ ಅಭಿವೃದ್ಧಿಗೆ ಗಮನಾರ್ಹ ಕೊಡುಗೆಯನ್ನು ನೀಡಿದ್ದರು. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪಗಳು. ಓಂ ಶಾಂತಿ’’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟಿಸಿದ್ದಾರೆ.

 ದೀಕ್ಷಿತ್ ಅವರ ನಿಧನದ ಸುದ್ದಿ ಹರಡುತ್ತಿದ್ದಂತೆ ಶ್ರದ್ಧಾಂಜಲಿಗಳು ಹರಿದುಬರತೊಡಗಿವೆ.

‘‘ ದೀಕ್ಷಿತ್ ಅವರ ನಿಧನವು ದಿಲ್ಲಿಗೆ ಭಾರೀ ನಷ್ಟವನ್ನುಂಟು ಮಾಡಿದೆ ಮತ್ತು ಅವರ ಕೊಡುಗೆಗಳು ಸದಾ ನೆನಪಿನಲ್ಲಿ ಉಳಿಯಲಿವೆ. ಅವರ ಕುಟುಂಬ ಸದಸ್ಯರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ದೀಕ್ಷಿತ್ ಆವರ ಆತ್ಮಕ್ಕೆ ಶಾಂತಿ ದೊರೆಯಲಿ’’ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಟ್ವಿಟರ್‌ನಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ.

‘‘ ಕಾಂಗ್ರೆಸ್ ಪಕ್ಷದ ಪ್ರೀತಿಯ ಪುತ್ರಿಯಾಗಿದ್ದ,ನಾನು ಆತ್ಮೀಯ ಸಂಬಂಧವನ್ನು ಹೊಂದಿದ್ದ ಶೀಲಾ ದೀಕ್ಷಿತ್‌ ಜಿ ಅವರ ನಿಧನದಿಂದ ನಾನು ಹತಾಶನಾಗಿದ್ದೇನೆ. ಈ ಅತೀವ ದುಃಖದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಮತ್ತು ಅವರು ಮೂರು ಬಾರಿ ಮುಖ್ಯಮಂತ್ರಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದ ದಿಲ್ಲಿಯ ಪ್ರಜೆಗಳಿಗೆ ನನ್ನ ಸಂತಾಪಗಳು’’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News