4ನೇ ಏಕದಿನ: ವಿಂಡೀಸ್ ‘ಎ’ಗೆ ರೋಚಕ ಜಯ

Update: 2019-07-20 17:54 GMT

ಕೂಲಿಡ್ಜ್, ಜು.20: ನಾಲ್ಕನೇ ಅನಧಿಕೃತ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ‘ಎ’ ತಂಡ ಭಾರತ ‘ಎ’ ವಿರುದ್ಧ 5 ರನ್‌ಗಳ ಅಂತರದಿಂದ ರೋಚಕ ಜಯ ಸಾಧಿಸಿದೆ. ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರ ವೀರೋಚಿತ ಪ್ರದರ್ಶನ ವ್ಯರ್ಥವಾಯಿತು.

5 ಪಂದ್ಯಗಳ ಸರಣಿಯಲ್ಲಿ ಮೊದಲ 3 ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತ ಈಗಾಗಲೇ ಸರಣಿಯನ್ನು ವಶಪಡಿಸಿಕೊಂಡಿದೆ. ನಾಲ್ಕನೇ ಪಂದ್ಯವನ್ನು ಗೆಲ್ಲಲು 299 ರನ್ ಬೆನ್ನಟ್ಟಿದ ಭಾರತ ತಂಡ ಅಕ್ಷರ್(ಔಟಾಗದೆ 81, 63 ಎಸೆತ, 8 ಬೌಂಡರಿ,1 ಸಿಕ್ಸರ್)ಏಕಾಂಗಿ ಹೋರಾಟದ ಹೊರತಾಗಿಯೂ ಕೂದಲೆಳೆಯಿಂದ ಸೋಲುಂಡಿತು.

ಆತಿಥೇಯ ವಿಂಡೀಸ್ 9 ವಿಕೆಟ್‌ಗಳ ನಷ್ಟಕ್ಕೆ 298 ರನ್ ಗಳಿಸಿತ್ತು. ಕಠಿಣ ಗುರಿ ಬೆನ್ನಟ್ಟಿದ ಭಾರತದ ಪರ ಅಗ್ರ ಕ್ರಮಾಂಕದ ದಾಂಡಿಗರು ಉತ್ತಮ ಆರಂಭ ಪಡೆದರೂ ದೊಡ್ಡ ಸ್ಕೋರ್ ಕಲೆ ಹಾಕಲು ವಿಫಲರಾದರು. ಒಂದು ಹಂತದಲ್ಲಿ ಭಾರತ 160 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ ವಾಶಿಂಗ್ಟನ್ ಸುಂದರ್ ಜೊತೆಗೂಡಿ 7ನೇ ವಿಕೆಟ್ ಜೊತೆಯಾಟದಲ್ಲಿ 60 ರನ್ ಸೇರಿಸಿದ ಅಕ್ಷರ್ ತಂಡವನ್ನು ಆಧರಿಸಿದರು. ಬಾಲಂಗೋಚಿಗಳಾದ ಖಲೀಲ್ ಅಹ್ಮದ್ ಹಾಗೂ ನವ್‌ದೀಪ್ ಸೈನಿ ಜೊತೆಗೂಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಯತ್ನಿಸಿದರು. ಆದರೆ ಈ ಇಬ್ಬರು 3 ಎಸೆತಗಳ ಅಂತರದಲ್ಲಿ ಪೆವಿಲಿಯನ್ ಸೇರಿದರು.

ಭಾರತಕ್ಕೆ ಕೊನೆಯ ಓವರ್‌ನಲ್ಲಿ ಗೆಲ್ಲಲು 9 ರನ್ ಅಗತ್ಯವಿತ್ತು. ಆದರೆ ಅಂತಿಮವಾಗಿ ಕೇವಲ 3 ರನ್ ಗಳಿಸಲಷ್ಟೇ ಶಕ್ತವಾಯಿತು. 9 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಸುಂದರ್(45), ಕೃನಾಲ್ ಪಾಂಡ್ಯ(45), ನಾಯಕ ಮನೀಶ್ ಪಾಂಡೆ(24), ಋತುರಾಜ್ ಗಾಯಕ್‌ವಾಡ್(20) ಹಾಗೂ ಹನುಮ ವಿಹಾರಿ(20)ಉತ್ತಮ ಆರಂಭ ಪಡೆದಿದ್ದರೂ ಇದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾದರು. ವಿಂಡೀಸ್ ಪರ ರೊವ್‌ಮನ್ ಪೊವೆಲ್(2-47) ಹಾಗೂ ಕೀಮೊ ಪಾಲ್(2-61)ತಮ್ಮಿಳಗೆ 4 ವಿಕೆಟ್‌ಗಳನ್ನು ಹಂಚಿಕೊಂಡರು.

ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ವಿಂಡೀಸ್ ‘ಎ’ ತಂಡ ರೋಸ್ಟನ್ ಚೇಸ್(84), ಡಿವೋನ್ ಥಾಮಸ್(70), ಜೋನಾಥನ್ ಚಾರ್ಟರ್(50) ಅರ್ಧಶತಕಗಳ ಕೊಡುಗೆ ಹಾಗೂ ನಾಯಕ ಸುನೀಲ್ ಅಂಬ್ರಿ(46)ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿತು. ಉತ್ತಮ ಪ್ರದರ್ಶನ ಮುಂದುವರಿಸಿದ ಎಡಗೈ ವೇಗದ ಬೌಲರ್ ಖಲೀಲ್ 67 ರನ್‌ಗೆ 4 ವಿಕೆಟ್‌ಗಳನ್ನು ಉರುಳಿಸಿದರು. 62 ರನ್‌ಗೆ 3 ವಿಕೆಟ್‌ಗಳನ್ನು ಉರುಳಿಸಿದ ಆವೇಶ್ ಖಾನ್ ಅವರು ಖಲೀಲ್‌ಗೆ ಉತ್ತಮ ಸಾಥ್ ನೀಡಿದರು. ಉಭಯ ತಂಡಗಳ ನಡುವೆ ಐದನೇ ಹಾಗೂ ಅಂತಿಮ ಏಕದಿನ ಪಂದ್ಯ ಇದೇ ಮೈದಾನದಲ್ಲಿ ರವಿವಾರ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News