2ನೇ ಬಾರಿ ಅಲ್ಜೀರಿಯಕ್ಕೆ ಆಫ್ರಿಕನ್ ಕಪ್

Update: 2019-07-20 18:12 GMT

 ಕೈರೋ, ಜು.20: ಸೆನೆಗಲ್ ತಂಡವನ್ನು ಫೈನಲ್ ಪಂದ್ಯದಲ್ಲಿ 1-0 ಅಂತರದಿಂದ ಸದೆಬಡಿದ ಅಲ್ಜೀರಿಯ ತಂಡ ಸುಮಾರು ಮೂರು ದಶಕಗಳ ಬಳಿಕ ಮೊದಲ ಬಾರಿ ಆಫ್ರಿಕನ್ ಕಪ್ ಆಫ್ ನೇಶನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಸ್ಟ್ರೈಕರ್ ಬಗ್ದಾದ್ ಬೌನೆಡ್ಜಾಹ್ 79ನೇ ಸೆಕೆಂಡ್‌ನಲ್ಲಿ ಮಿಂಚಿನ ವೇಗದಲ್ಲಿ ಗಳಿಸಿದ ಏಕೈಕ ಗೋಲು ಅಲ್ಜೀರಿಯ ಪ್ರಶಸ್ತಿ ಎತ್ತುವಲ್ಲಿ ಪ್ರಮುಖ ಪಾತ್ರವಹಿಸಿತು.

ಕೈರೋ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಸೆನೆಗಲ್ ಡಿಫೆಂಡರ್ ಸಲಿಫ್ ಸಾನೆ ಹಾಗೂ ಗೋಲ್‌ಕೀಪರ್ ಅಲ್ಫ್ರೆಡ್ ಗೊಮಿಸ್‌ರನ್ನು ವಂಚಿಸಿ ಬಗ್ದಾದ್ ಗೋಲುಗಳಿಸಿದರು. ಬಗ್ದಾದ್39 ವರ್ಷಗಳ ಬಳಿಕ ಆಫ್ರಿಕನ್ ಫೈನಲ್‌ನಲ್ಲಿ ಅತ್ಯಂತ ವೇಗದ ಗೋಲು(79ನೇ ಸೆಕೆಂಡ್)ಗಳಿಸಿ 1990ರ ಬಳಿಕ ಅಲ್ಜೀರಿಯ ಮೊದಲ ಬಾರಿ ಪ್ರಶಸ್ತಿ ಎತ್ತಲು ನೆರವಾದರು.

 ಅಲ್ಜೀರಿಯ 1-0 ಅಂತರದಿಂದ ಜಯ ಸಾಧಿಸಿರುವುದು ಖಚಿತವಾಗುತ್ತಿದ್ದಂತೆಯೇ ಆಟಗಾರರು ಮೈದಾನದ ತುಂಬೆಲ್ಲಾ ಓಡಿದರಲ್ಲದೆ, ಜಾಹೀರಾತು ಫಲಕದ ಮೇಲೆ ಕುಣಿದು ಕುಪ್ಪಳಿಸಿದರು. ಅಲ್ಜೀರಿಯಾ 29 ವರ್ಷಗಳ ಹಿಂದೆ ಕೊನೆಯ ಬಾರಿ ಆಫ್ರಿಕನ್ ಕಪ್ ಆಫ್ ನೇಶನ್ಸ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿತ್ತು.

ಸೆನೆಗಲ್ ಈ ತನಕ ಆಫ್ರಿಕನ್ ಕಪ್ ಜಯಿಸಿಲ್ಲ. 2002ರಲ್ಲಿ ಫೈನಲ್ ತಲುಪಿದ್ದ ಸೆನೆಗಲ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಕಳೆದುಕೊಂಡು ಪ್ರಶಸ್ತಿ ವಂಚಿತವಾಗಿತ್ತು.

ಈಜಿಪ್ಟ್‌ನಲ್ಲಿ ಅಲ್ಜೀರಿಯ ಚಾಂಪಿಯನ್‌ಪಟ್ಟಕ್ಕೇರಲು ಅರ್ಹ ತಂಡವಾಗಿದೆ. ಗ್ರೂಪ್ ಹಂತದಲ್ಲಿ ಸೆನೆಗಲ್ ವಿರುದ್ಧ 1-0 ಅಂತರದಿಂದ ಗೆಲುವು ಸೇರಿದಂತೆ ಪ್ರತಿಯೊಂದು ಪಂದ್ಯವನ್ನು ಜಯಿಸಿದೆ.

ಮ್ಯಾಂಚೆಸ್ಟರ್ ಸಿಟಿ ಪರ ಇಂಗ್ಲೀಷ್ ಪ್ರೀಮಿಯರ್ ಲೀಗ್ ಪ್ರಶಸ್ತಿ ಜಯಿಸಿರುವ ಅಲ್ಜೀರಿಯದ ನಾಯಕ ರಿಯಾದ ಮಹ್ರೆಝ್ ಇದೀಗ ಆಫ್ರಿಕನ್ ಕಪ್ ಜಯಿಸಿ ಗಮನ ಸೆಳೆದಿದ್ದಾರೆ.

ರಿಯಾದ್ ಆಫ್ರಿಕನ್ ಸಾಕರ್ ಕಾನ್ಫಡರೇಶನ್ ಹಾಗೂ ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊ ಸಮ್ಮುಖದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿದರು.

  ರಿಯಾದ್ ಅಲ್ಜೀರಿಯ ಆಫ್ರಿಕನ್ ಕಪ್ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ರಿಯಾದ್ ಅವರ ಇಂಜುರಿ ಟೈಮ್‌ನಲ್ಲಿ ಗಳಿಸಿದ್ದ ಫ್ರೀ-ಕಿಕ್ ನೆರವಿನಿಂದ ಅಲ್ಜೀರಿಯ ಫೈನಲ್‌ಗೆ ತಲುಪಿದೆ. ಟೂರ್ನಿಯಲ್ಲಿ ಮೂರು ಗೋಲುಗಳನ್ನು ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News