​ವಶಪಡಿಸಿಕೊಂಡ ಟ್ಯಾಂಕರ್‌ನಲ್ಲಿದ್ದ ಭಾರತೀಯರನ್ನು ಬಿಡುಗಡೆ ಮಾಡಿ: ಇರಾನ್‌ಗೆ ಭಾರತ ಆಗ್ರಹ

Update: 2019-07-21 03:43 GMT

ಹೊಸದಿಲ್ಲಿ, ಜು.21: ಹರ್ಮರ್ ಕೊಲ್ಲಿಯಲ್ಲಿ ಟೆಹ್ರಾನ್ ವಶಪಡಿಸಿಕೊಂಡ ಬ್ರಿಟಿಷ್ ತೈಲ ಟ್ಯಾಂಕರ್‌ನಲ್ಲಿದ್ದ ಭಾರತೀಯ ಸಿಬ್ಬಂದಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಭಾರತವು ಇರಾನ್‌ಗೆ ಮನವಿ ಮಾಡಿದೆ. ಈ ಮಧ್ಯೆ ಇರಾನ್ ವಿರುದ್ಧ ಅಮೆರಿಕ ವಿಧಿಸಿರುವ ದಿಗ್ಬಂಧನವನ್ನು ಮತ್ತಷ್ಟು ಬಿಗಿಗೊಳಿಸಿ, ಅಮೆರಿಕನ್ ಪಡೆಗಳನ್ನು ನಿಯೋಜಿಸಿರುವ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇರಾನ್ ವಶಪಡಿಸಿಕೊಂಡ ಹಡಗಿನಲ್ಲಿ 18 ಮಂದಿ ಭಾರತೀಯ ಸಿಬ್ಬಂದಿ ಇದ್ದಾರೆ ಎನ್ನಲಾಗಿದೆ.

"ಘಟನೆ ಬಗ್ಗೆ ನಾವು ಮತ್ತಷ್ಟು ವಿವರ ಪಡೆಯುತ್ತಿದ್ದೇವೆ. ಟ್ಯಾಂಕರ್‌ನಲ್ಲಿದ್ದ ಭಾರತೀಯ ಸಿಬ್ಬಂದಿಯನ್ನು ತಕ್ಷಣ ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸುವ ಸಂಬಂಧ ಇರಾನ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸ್ಟೆನಾ ಇಂಪೆರೊ ಎಂಬ ತೈಲ ಟ್ಯಾಂಕರ್ ಅನ್ನು ಇರಾನ್ ವಶಪಡಿಸಿಕೊಂಡಿತ್ತು. ಬ್ರಿಟಿಷ್ ಧ್ವಜದ ಈ ಟ್ಯಾಂಕರ್‌ನಲ್ಲಿ 23 ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ.

ಇರಾನಿನ ರೆವಲ್ಯೂಶನರಿ ಗಾರ್ಡ್ ಸಿಬ್ಬಂದಿ ಈ ಟ್ಯಾಂಕರ್ ವಶಪಡಿಸಿಕೊಂಡಿದ್ದರು. ಇರಾನ್‌ನ ಮೀನುಗಾರಿಕೆ ದೋಣಿಗೆ ಢಿಕ್ಕಿಯಾದ ಹಿನ್ನೆಲೆಯಲ್ಲಿ ಟ್ಯಾಂಕರ್ ವಶಪಡಿಸಿಕೊಳ್ಳಲಾಗಿದೆ ಎಂದು ಇರ್ನಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಜುಲೈ ಆರಂಭದಲ್ಲಿ ಬ್ರಿಟಿಷ್ ಮೆರೈನ್ಸ್ ಆ್ಯಂಡ್ ಗಿಬ್ರಲ್ಟರ್ ಪೊಲೀಸರು ಇಬ್ರಿಯನ್ ಪರ್ಯಾಯ ದ್ವೀಪದಲ್ಲಿ ವಶಪಡಿಸಿಕೊಂಡಿದ್ದರು. ಯೂರೋಪಿಯನ್ ದಿಗ್ಬಂಧನವನ್ನು ಉಲ್ಲಂಘಿಸಿ ಸಿರಿಯಾಗೆ ಕಚ್ಚಾ ತೈಲವನ್ನು ಸಾಗಾಟ ಮಾಡುತ್ತಿರುವ ಆರೋಪದಲ್ಲಿ ಈ ಹಡಗು ವಶಪಡಿಸಿಕೊಳ್ಳಲಾಗಿತ್ತು. ಜೂನ್ ಮಧ್ಯಭಾಗದಲ್ಲಿ ಎರಡು ತೈಲ ಟ್ಯಾಂಕರ್‌ಗಳ ಮೇಲೆ ನಡೆದ ದಾಳಿಗೆ ಇರಾನ್ ಕಾರಣ ಎಂದು ಅಮೆರಿಕ ದೂರಿದೆ. ಆದರೆ ಟೆಹ್ರಾನ್ ತನ್ನ ಪಾತ್ರವನ್ನು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News