​ವಿಶ್ವಕಪ್ ಕ್ರಿಕೆಟ್: ಹಿರಿಯ ಭಾರತೀಯ ಆಟಗಾರರು ಕುಟುಂಬ ನಿಯಮ ಉಲ್ಲಂಘಿಸಿದ್ದರೇ?

Update: 2019-07-21 03:53 GMT

ಹೊಸದಿಲ್ಲಿ, ಜು.21: ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರರು ಇತ್ತೀಚೆಗೆ ಮುಕ್ತಾಯವಾದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆ, ಕುಟುಂಬ ನಿಯಮವನ್ನು ಉಲ್ಲಂಘಿಸಿದ್ದಾರೆ ಎನ್ನಲಾದ ಪ್ರಕರಣವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ವ್ಯವಸ್ಥಾಪನಾ ತಂಡ ಗಂಭೀರವಾಗಿ ಪರಿಗಣಿಸಿವೆ.

ತಂಡದ ಸದಸ್ಯರ ಕುಟುಂಬದವರು ವಿಶ್ವಕಪ್‌ನ ವೇಳೆ ಆಟಗಾರರ ಜತೆ ಇರಬಹುದಾದ ಗರಿಷ್ಠ ದಿನಗಳ ಮಿತಿಯನ್ನು ಉಲ್ಲಂಘಿಸಲಾಗಿದೆ ಎನ್ನುವುದು ಬಿಸಿಸಿಐ ಅಸಮಾಧಾನಕ್ಕೆ ಕಾರಣ.

ಮೇ 3ರಂದು ನಡೆದ ಆಡಳಿತಗಾರರ ಸಮಿತಿಯ ನಡಾವಳಿಯಲ್ಲಿ, "ಪುರುಷರ ತಂಡದ ಒಬ್ಬ ಆಟಗಾರರು ಅನುಮತಿ ನೀಡಿದ ಅವಧಿಗಿಂತ ಮುನ್ನವೇ ಪತ್ನಿಯನ್ನು ವಿಶ್ವಕಪ್ ಪ್ರವಾಸದ ವೇಳೆ ಕರೆದೊಯ್ಯಲು ಅನುಮತಿ ಕೋರಿದ್ದಾರೆ" ಎಂದು ಸ್ಪಷ್ಟಪಡಿಸಲಾಗಿತ್ತು. ಇದಕ್ಕೆ ಸಮಿತಿ ಅವಕಾಶ ನಿರಾಕರಿಸಿತ್ತು. ಆದರೆ ಆ ಆಟಗಾರನ ಪತ್ನಿ ಟೂರ್ನಿ ಆರಂಭಕ್ಕೆ ಮುನ್ನವೇ ಆಟಗಾರನ ಜತೆಗೆ ತೆರಳಿ ಟೂರ್ನಿಯುದ್ದಕ್ಕೂ ಜತೆಗಿದ್ದರು. ಇದನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ.

ಎಪ್ರಿಲ್ 8ರಂದು ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿಯವರು, ಆಡಳಿತ ಸಮಿತಿಗೆ ಮನವಿ ಮಾಡಿ, ಐಸಿಸಿ ಟೂರ್ನಿಗಳ ಮೊದಲ 20 ದಿನಗಳ ಅವಧಿಯಲ್ಲಿ ಕುಟುಂಬ ಸದಸ್ಯರು ಆಟಗಾರರ ಜತೆ ತೆರಳಲು ಅನುಮತಿ ನಿರಾಕರಿಸಬೇಕು. ಈ ನಿಟ್ಟಿನಲ್ಲಿ ಆಟಗಾರರ ಗುತ್ತಿಗೆ ಪರಿಷ್ಕರಿಸಬೇಕು ಎಂದು ಕೋರಿದ್ದರು. ಪ್ರಸ್ತುತ ಇರುವ ನಿಯಮಾವಳಿಯಂತೆ ಮೊದಲ 15 ದಿನದ ಬದಲಾಗಿ ಇದನ್ನು 20 ದಿನಕ್ಕೆ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದರು. ಜತೆಗೆ ತಂಡದ ಬಸ್‌ನಲ್ಲಿ ಕುಟುಂಬದವರು ಪ್ರಯಾಣಿಸಲು ಅವಕಾಶ ನೀಡಬಾರದು ಎಂದು ಸಲಹೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News