×
Ad

‘ವಿಪ್ ನೀಡುವ ಹಕ್ಕು’ ಪಕ್ಷದ ನಾಯಕರಿಗೆ ಇದೆ: ಸ್ಪೀಕರ್ ರಮೇಶ್‌ ಕುಮಾರ್ ರೂಲಿಂಗ್

Update: 2019-07-22 17:47 IST

ಬೆಂಗಳೂರು, ಜು. 22: ತಮ್ಮ ಪಕ್ಷದ ಶಾಸಕರಿಗೆ ಆಯಾ ಪಕ್ಷದ ನಾಯಕರಿಗೆ ‘ವಿಪ್’ ನೀಡುವ ಜವಾಬ್ದಾರಿ ಮೊಟಕು ಮಾಡುವುದಿಲ್ಲ ಎಂದು ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ರೂಲಿಂಗ್ ನೀಡಿದ್ದಾರೆ.

ಸೋಮವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎತ್ತಿದ ಕ್ರಿಯಾಲೋಪಕ್ಕೆ ಸಂಬಂಧಿಸಿದಂತೆ ರೂಲಿಂಗ್ ನೀಡಿದ ಅವರು, ಸಂವಿಧಾನದ 10ನೆ ಶೆಡ್ಯೂಲ್‌ನಲ್ಲಿ ಶಾಸಕಾಂಗ ಪಕ್ಷದ ನಾಯಕರಿಗೆ ನೀಡಿರುವ ಜವಾಬ್ದಾರಿ ಮೊಟಕು ಮಾಡುವ ಕೆಲಸ ಮಾಡುವುದಿಲ್ಲ ಎಂದರು.

‘ಶಾಸಕರ ರಾಜೀನಾಮೆ ವಿಚಾರದಲ್ಲಿ ಸ್ಪೀಕರ್ ಅವರ ಅಧಿಕಾರ ವ್ಯಾಪ್ತಿಯಲ್ಲಿ ಪ್ರವೇಶಿಸುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಹೀಗಾಗಿ ಸ್ಪೀಕರ್ ಸ್ವಾತಂತ್ರಕ್ಕೆ ಯಾವುದೇ ರೀತಿಯ ಧಕ್ಕೆ ಇಲ್ಲ ಹಾಗೂ ಉಲ್ಲಂಘನೆಯೂ ಆಗಿಲ್ಲ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.

ಸ್ಪಷ್ಟ ಸಂದೇಶ ನೀಡಿ: ಈ ವೇಳೆ ಮಧ್ಯಪ್ರವೇಶಿಸಿ ಜೆಡಿಎಸ್ ಹಿರಿಯ ಸದಸ್ಯ ಶಿವಲಿಂಗೇಗೌಡ, ಶಾಸಕರು ಸದನದಿಂದ ಹೊರಗೆ ಇದ್ದು ‘ವಿಪ್’ ಉಲ್ಲಂಘನೆ ಆಗುವುದಿಲ್ಲ ಎಂದು ಭಾವಿಸಿದ್ದಾರೆ. ಅವರಿಗೆ ಸದನದ ಮೂಲಕ ಸ್ಪಷ್ಟ ಸಂದೇಶ ನೀಡಬೇಕೆಂದು ಸ್ಪೀಕರ್‌ಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್‌ ಕುಮಾರ್, ‘ವಿಪ್ ಉಲ್ಲಂಘಿಸಿದ ಮೇಲೆ ಶಾಸಕರ ವಿರುದ್ಧ ದೂರು ನೀಡಿದರೆ ಕಾನೂನು ರೀತಿಯಲ್ಲಿ ನಾನು ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇನೆ. ಸದ್ಯಕ್ಕೆ ನಾನು ಉತ್ತರ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಈ ಸದನಕ್ಕೆ ಬರದೆ ಎಲ್ಲೋ ಕೂತಿರುವವರಿಗೆ ಸದನದ ಮೂಲಕ ಸಂದೇಶ ನೀಡಲು ಆಗುವುದಿಲ್ಲ. ಶಾಸಕರಿಗೆ ವಿಪ್ ಅಥವಾ ನೋಟಿಸ್ ನೀಡುವುದು ನಿಮ್ಮ ನಿಮ್ಮ ಪಕ್ಷಗಳಿಗೆ ಬಿಟ್ಟಿದ್ದು. ನನ್ನ ಬಳಿ ದೂರು ಬಂದರೆ ಕಾನೂನಾತ್ಮಕವಾಗಿ ನಾನು ಕ್ರಮ ಕೈಗೊಳ್ಳುವೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News