ಬೆಂಗಳೂರು ವಿವಿ: ಪ್ರಸಕ್ತ ಸಾಲಿನಿಂದಲೇ ಆರೋಗ್ಯ ವಿಮೆ ಸೌಲಭ್ಯ!

Update: 2019-07-22 12:45 GMT

ಬೆಂಗಳೂರು, ಜು.22: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ನೀಡುವ ಯೋಜನೆ ಮರು ಆರಂಭವಾಗಲಿದ್ದು, ಪ್ರಸಕ್ತ ಸಾಲಿನಿಂದಲೇ ವಿಮೆ ಸೌಲಭ್ಯ ಸಿಗುವ ನಿರೀಕ್ಷೆಯಿದೆ.

ಇತ್ತೀಚಿಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಆರೋಗ್ಯ ವಿಮೆ ವಿಳಂಬವಾಗುತ್ತಿರುವ ಸಂಬಂಧ ಗಂಭೀರ ಚರ್ಚೆ ನಡೆದಿದ್ದು, ಇದಕ್ಕೆ ಕೆಲವು ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಯು ವಿಮೆ ನೀಡುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲಿಯೇ ಅದಕ್ಕೆ ಚಾಲನೆ ಸಿಗುವ ಸಾಧ್ಯತೆಯಿದೆ ಎಂದು ವಿವಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

2019-20 ನೆ ಸಾಲಿನಿಂದಲೇ ವಿವಿಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವೈದ್ಯಕೀಯ ವಿಮೆ ಸಿಗುವ ಸಾಧ್ಯತೆಯಿದೆ. 2017 ರಲ್ಲಿ ಆರೋಗ್ಯ ವಿಮೆ ನೀಡುವ ಸಂಬಂಧ ಸಮಿತಿಯೊಂದನ್ನು ರಚಿಸಲಾಗಿತ್ತು. ಆ ಸಮಿತಿಯು ವರದಿ ನೀಡಿದ್ದರೂ, ಅದನ್ನು ಜಾರಿ ಮಾಡುವ ಗೋಜಿಗೆ ಹೋಗಿರಲಿಲ್ಲ. ಇದೀಗ ಸಿಂಡಿಕೇಟ್ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿದ್ದು, ವಿಮೆ ವಿಚಾರ ಮುನ್ನೆಲೆಗೆ ಬಂದಿದೆ.

8,500 ವಿದ್ಯಾರ್ಥಿಗಳು ವ್ಯಾಸಂಗ: ಬೆಂಗಳೂರು ವಿಶ್ವವಿದ್ಯಾಲಯವು ಅತ್ಯಂತ ವಿಶಾಲವಾಗಿದ್ದು, ವಿವಿ ಆವರಣದಲ್ಲಿಯೇ 52 ವಿಭಾಗಗಳಿದ್ದು, 8,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳು ವಿಮೆ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ವಿವಿ ವ್ಯಾಪ್ತಿಗೆ ಸೇರುವ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿಮೆ ಸೌಲಭ್ಯ ಕಲ್ಪಿಸಲು ಆರ್ಥಿಕವಾಗಿ ಕಷ್ಟವಾಗುವ ಹಿನ್ನೆಲೆಯಲ್ಲಿ ಕ್ಯಾಂಪಸ್ ಒಳಗಿನ ವಿದ್ಯಾರ್ಥಿಗಳಿಗಷ್ಟೇ ವಿಮೆ ನೀಡಲಾಗುತ್ತಿದೆ.

ಹೆಚ್ಚುವರಿ ಹಣ ವಸೂಲಿ ಬೇಡ: ವಿವಿ ಕ್ಯಾಂಪಸ್ ಒಳಗಿನ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಇದೇ ನೆಪವನ್ನಿಟ್ಟುಕೊಂಡು ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದು ಸರಿಯಲ್ಲ. ಎಲ್ಲ ಮೊತ್ತವನ್ನು ವಿವಿಯೇ ಪಾವತಿ ಮಾಡಬೇಕು. ಅಲ್ಲದೆ, ವಿವಿ ಆವರಣದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಮೂಲಸೌಕರ್ಯಗಳನ್ನು ಹೆಚ್ಚಿಸಬೇಕು. ಗುಣಮಟ್ಟದ ಚಿಕಿತ್ಸೆ ನೀಡುವ ಕಡೆಗೆ ಗಮನ ನೀಡಬೇಕೆಂದು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿವೆ.

ಉಮ್ಮೇ ಕುಲ್ಸುಮ್ ನೇತೃತ್ವದ ಸಮಿತಿ: 2019-20 ನೆ ಸಾಲಿನಿಂದಲೇ ಆರೋಗ್ಯ ವಿಮೆ ಜಾರಿಗೊಳಿಸಲು ವಿವಿ ಮುಂದಾಗಿದೆ. ಈ ನಿಟ್ಟಿನಲ್ಲಿ ಸಮಗ್ರ ರೂಪುರೇಷೆಗಳನ್ನು ಸಿದ್ಧಪಡಿಸುವ ಉದ್ದೇಶದಿಂದ ಹಿರಿಯ ಡೀನ್ ಪ್ರೊ.ಉಮ್ಮೇ ಕುಲ್ಸುನ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಉಳಿದ ಎಲ್ಲ ವಿಭಾಗಗಳ ಡೀನ್‌ಗಳು ಇದರ ಸದಸ್ಯರಾಗಿದ್ದು, ವಿತ್ತಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಈ ಸಮಿತಿಯು ಆರೋಗ್ಯ ವಿಮೆಯ ಪ್ರೀಮಿಯಂ ಎಷ್ಟಿರಬೇಕು, ಇದರಲ್ಲಿ ವಿದ್ಯಾರ್ಥಿ ಹಾಗೂ ವಿವಿಯು ಯಾವ ಪ್ರಮಾಣದಲ್ಲಿ ಭಾಗಿದಾರರಾಗಿರಬೇಕು ಸೇರಿದಂತೆ ಮತ್ತಿತರೆ ಅಂಶಗಳನ್ನು ಸಂಗ್ರಹಿಸಿ ವರದಿ ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News