ರಾಜೀನಾಮೆ ಅಂಗೀಕಾರ ಆಗುವವರೆಗೂ ವಿಶ್ವಾಸಮತ ಯಾಚನೆ ಬೇಡ: ಸಚಿವ ಕೃಷ್ಣಬೈರೇಗೌಡ

Update: 2019-07-22 13:20 GMT

ಬೆಂಗಳೂರು, ಜು. 22: ಅತೃಪ್ತರ ರಾಜೀನಾಮೆ ಪ್ರಕರಣ ತ್ರಿಶಂಕು ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ವಿಶ್ವಾಸಮತ ಯಾಚನೆ ಸರಿಯಲ್ಲ. ಹೀಗಾಗಿ ಸಿಎಂ ಕುಮಾರಸ್ವಾಮಿ ನೇತೃತ್ವದ ಸರಕಾರದ ಬಹುಮತ ಯಾಚನೆಯನ್ನು ಮುಂದೂಡಬೇಕು ಎಂದು ಸಚಿವ ಕೃಷ್ಣಬೈರೇಗೌಡ ಇಂದಿಲ್ಲಿ ಆಗ್ರಹಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಸ್ತಾವದ ಮೇಲೆ ಮುಂದುವರೆದ ಚರ್ಚೆಯಲ್ಲಿ ಮಾತನಾಡಿದ ಅವರು, ಶಾಸಕರ ರಾಜೀನಾಮೆ ಅಂಗೀಕಾರ ಇತ್ಯರ್ಥವಾಗದೆ ವಿಶ್ವಾಸಮತ ಯಾಚನೆ ಸರಿಯಲ್ಲ. 2017ರಲ್ಲಿ ತಮಿಳುನಾಡಿನಲ್ಲಿ ವಿಪ್ ಉಲ್ಲಂಘಿಸಿದ ಆಡಳಿತ ಪಕ್ಷದ 11 ಮಂದಿ ಶಾಸಕರನ್ನು ಅಲ್ಲಿನ ಸ್ಪೀಕರ್ ಅನರ್ಹಗೊಳಿಸಿದ್ದರು. ಅಲ್ಲಿನ ಸ್ಪೀಕರ್ ನಿರ್ಣಯವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ರಾಜ್ಯದಲ್ಲಿ ಅದೇ ಸ್ಥಿತಿ ನಿರ್ಮಾಣವಾಗಲಿದೆ. ಆಡಳಿತಾರೂಢ ಮೈತ್ರಿ ಪಕ್ಷಗಳ 15 ಮಂದಿ ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾಗಿ ಮುಂಬೈನಲ್ಲಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದಲ್ಲಿ ವಿಪ್ ನೀಡುವ ಶಾಸಕಾಂಗ ಪಕ್ಷದ ನಾಯಕರ ಹಕ್ಕಿನ ಮೊಟಕುಗೊಳಿಸಿರುವ ಸಂಬಂಧ ಗೊಂದಲಗಳಿವೆ. ಅಲ್ಲದೆ, ವಿಪ್ ಉಲ್ಲಂಘಿಸಿರುವ ಶಾಸಕರ ವಿರುದ್ಧ ಈಗಾಗಲೇ ದೂರು ನೀಡಿದ್ದು, ಆ ಪ್ರಕರಣವೂ ಸ್ಪೀಕರ್ ಅವರು ಮುಂದಿದೆ ಎಂದು ತಿಳಿಸಿದರು.

ಹೀಗಾಗಿ ಸ್ಪೀಕರ್ ಅವರ ಮುಂದಿರುವ ಅತೃಪ್ತ ಶಾಸಕರ ರಾಜೀನಾಮೆ ಅರ್ಜಿ ಇತ್ಯರ್ಥ, ವಿಪ್ ಉಲ್ಲಂಘನೆ ಸಂಬಂಧ ಕ್ರಮ ಜರುಗಿಸಿದ ಬಳಿಕ ಮೈತ್ರಿ ಸರಕಾರದ ವಿಶ್ವಾಸಮತಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೃಷ್ಣಬೈರೇಗೌಡ ಇದೇ ವೇಳೆ ಪ್ರತಿಪಾದಿಸಿದರು.

ಜನರಿಂದ ಆಯ್ಕೆಯಾದ ಶಾಸಕರಿಗೆ ಸ್ವಪ್ರೇರಣೆಯಿಂದ ರಾಜೀನಾಮೆ ನೀಡುವ ಅಧಿಕಾರವಿದೆ. ಆದರೆ, ಅದು ನೈಜತೆಯಿಂದ ಕೂಡಿರಬೇಕು. ಆದರೆ, ರಾಜೀನಾಮೆ ನೀಡಿರುವ ಪ್ರಕರಣ ಇತ್ಯರ್ಥವಾಗದೆ ವಿಶ್ವಾಸಮತ ಯಾಚನೆ ಮಾಡಿದರೆ ಅದಕ್ಕೆ ‘ಸಿಂಧುತ್ವ’ವೇ ಇರುವುದಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News