‘ನಾಟಿಕೋಳಿ ತಿನ್ನಿ.. ನಿಮ್ಮ ಅಮ್ಮನಿಗೆ ನಾನು ಹೇಳುವೆ’: ಸ್ಪೀಕರ್ ತಮಾಷೆಗೆ ವಿಧಾನಸಭೆಯಲ್ಲಿ ನಗೆ ಅಲೆ

Update: 2019-07-22 15:50 GMT

ಬೆಂಗಳೂರು, ಜು. 22: ‘ಹೃದಯ ಶಸ್ತ್ರ ಚಿಕಿತ್ಸೆಯಾಗಿದೆ ಎಂದು ಬಿರಿಯಾನಿ ತಿನ್ನುವುದನ್ನು ಬಿಡಬೇಡಿ. ನಾಟಿಕೋಳಿ ಅಥವಾ ಮೀನು ತಿನ್ನಬಹುದು. ನಾನು ನಿಮ್ಮ ಅಮ್ಮನೊಂದಿಗೆ ಮಾತನಾಡುತ್ತೇನೆ’ ಎಂದು ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ತಮಾಷೆ ಮಾಡಿದ್ದು, ವಿಧಾನಸಭೆಯಲ್ಲಿ ನಗೆ ಅಲೆಯನ್ನು ಉಕ್ಕಿಸಿತು.

ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಸ್ತಾವದ ಮೇಲೆ ಸಚಿವ ಕೃಷ್ಣಬೈರೇಗೌಡ ಮಾತನಾಡುತ್ತಿದ್ದ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಏನ್ರೀ ಈಶ್ವರಪ್ಪ ಇಷ್ಟೊಂದು ನಗ್ತಾ ಇದ್ದೀರಿ’ ಎಂದು ಪ್ರಶ್ನಿಸಿದರು.

‘ಸತ್ಯ ಹೇಳಿದ್ದೀರಿ, ಅದಕ್ಕೆ ನಗುತ್ತಿದ್ದೇನೆ ಎಂದು ಈಶ್ವರಪ್ಪ ಮಸಾಲೆ ಬೆರೆಸಿದರು. ವಿಶ್ವಾಸಮತದ ಗಂಭೀರ ಚರ್ಚೆಯಲ್ಲಿದ್ದ ವೇಳೆ ಸದಸ್ಯರಿಗೆ ಬಿರಿಯಾನಿ ಪ್ರಸಂಗ ಹಾಸ್ಯದ ಅಲೆಯನ್ನು ಉಕ್ಕಿಸಿತು. ಸಚಿವ ಕೃಷ್ಣಭೈರೇಗೌಡ ಐಎಂಎ ಹಗರಣದ ವಿಚಾರ ಪ್ರಸ್ತಾಪಿಸಿದಾಗ ಮಧ್ಯಪ್ರವೇಶಿಸಿದ ಶಾಸಕ ಸಿ.ಟಿ.ರವಿ, ಇದಕ್ಕೆ ಬಿರಿಯಾನಿ ತಿಂದವರು ಉತ್ತರ ಕೊಡಬೇಕು ಎಂದು ಲೇವಡಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬಿಜೆಪಿ ಸದಸ್ಯ ಸಿ.ಟಿ.ರವಿ ಬಿರಿಯಾನಿ ತಿಂದವರು ಎಂದು ಪರೋಕ್ಷವಾಗಿ ನನ್ನನ್ನೇ ಉಲ್ಲೇಖಿಸಿದ್ದು ಎಂದು ವಿವರಣೆ ನೀಡಲು ಆರಂಭಿಸಿದರು. ಸಭಾಧ್ಯಕ್ಷರೇ ನಾನು ಬಿರಿಯಾನಿ ತಿಂದಿಲ್ಲ. ಎರಡನೆ ಬಾರಿ ಹೃದಯ ಶಸ್ತ್ರಚಿಕಿತ್ಸೆಯಾದ ನಂತರ ಮಾಂಸಾಹಾರ ಸೇವನೆ ಬಿಟ್ಟಿದ್ದೇನೆ ಎಂದರು.

ಕೃಷ್ಣಬೈರೇಗೌಡ ಉಲ್ಲೇಖಿಸಿದ ಶಾಸಕರ ಜತೆ ಇಫ್ತಾರ್ ಕೂಟಕ್ಕೆ ತೆರಳಿದ್ದ ವೇಳೆ ನಾನು ಅಲ್ಲಿ ಖರ್ಜೂರವೊಂದನ್ನು ಬಾಯಿಗೆ ಹಾಕಿಕೊಂಡಿದ್ದೆ ಅಷ್ಟೇ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು. ಮಾಂಸಾಹಾರ ಸೇವನೆ ತ್ಯಜಿಸಬೇಡಿ, ನಿಮ್ಮಂಥವರೆ ಬಿಟ್ಟರೆ ನಮ್ಮಂತವರ ಬೆಂಬಲಕ್ಕೆ ನಿಲ್ಲುವವರು ಯಾರು ಎಂದು ಸ್ಪೀಕರ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News