ಪ್ರಜಾಪ್ರಭುತ್ವ ವ್ಯವಸ್ಥೆ ಅನಾಥವಾಗಿದೆ ಎಂಬ ಚಿಂತೆ ನಮ್ಮದು: ಸ್ಪೀಕರ್ ರಮೇಶ್‌ ಕುಮಾರ್

Update: 2019-07-22 15:15 GMT

ಬೆಂಗಳೂರು, ಜು. 22: ರಾಜ್ಯದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಾಸಕರಿಗೆ ಮತ ನೀಡಿದ ಜನತೆ ಮತ್ತು ಪ್ರಜಾಪ್ರಭುತ್ವ ಅನಾಥವಾಗಿದೆ ಎಂಬ ಚಿಂತೆ ನಮ್ಮದು ಎಂದು ಸ್ಪೀಕರ್ ರಮೇಶ್‌ ಕುಮಾರ್ ಮಾರ್ಮಿಕವಾಗಿ ನುಡಿದಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಸ್ತಾವದ ಮೇಲಿನ ಚರ್ಚೆ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ರಾಜೀನಾಮೆ ನೀಡಿದ ಶಾಸಕರು ಅನರ್ಹರಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾದವರು. ಅವರಿಗೆ ಕಲಾಪಕ್ಕೆ ಬರುವ ಎಲ್ಲ ಹಕ್ಕಿದೆ. ಹೀಗಾಗಿ ಅವರ ಹೆಸರು ಪ್ರಸ್ತಾಪಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಈ ಮನೆಯ ಸದಸ್ಯರಲ್ಲದವರ ಹೆಸರನ್ನು ಉಲ್ಲೇಖಿಸುವಂತಿಲ್ಲ. ರಾಜೀನಾಮೆ ನೀಡಿರುವ ಶಾಸಕರ ವಿಚಾರದಲ್ಲಿ ‘ವಾಸನೆ’ ಹೊರ ಬರುತ್ತಿದೆ. ಸ್ವಾತಂತ್ರ ಬಂದ ನಂತರ ಯಾವುದೇ ಸ್ಪೀಕರ್‌ಗೆ ಇಂತಹ ಸ್ಥಿತಿ ಬಂದಿರಲಿಕ್ಕಿಲ್ಲ. ಇಂತಹ ನಡವಳಿಕೆ ಯಾರಿಗೂ ಗೌರವ ಬರುವುದಿಲ್ಲ ಎಂದು ಛಾಟಿ ಬೀಸಿದರು.

ಸಚಿವರ ವಿರುದ್ಧ ಆರೋಪ ಮಾಡುವ ವೇಳೆ ಮೊದಲೇ ಪತ್ರ ನೀಡಬೇಕು. ಅಲ್ಲದೆ, ಸೂಕ್ತ ದಾಖಲೆ ಒದಗಿಸಬೇಕು. ಆದರೆ, ಸದಸ್ಯರ ಬಗ್ಗೆ ಮೊದಲೇ ಪತ್ರ ನೀಡುವ ಅಗತ್ಯವಿಲ್ಲ. ಪೂರಕ ದಾಖಲೆಗಳನ್ನು ನೀಡಬೇಕಾಗುತ್ತದೆ. ಇಲ್ಲವಾದರೆ ಅವರು ಪ್ರಸ್ತಾಪಿಸುವ ವಿಚಾರಗಳನ್ನು ಕಡತದಿಂದ ತೆಗೆಯಲಾಗುವುದು ಎಂದು ಹೇಳಿದರು.

ಆರಂಭಕ್ಕೆ ಮಾತನಾಡಿದ ಬಿಜೆಪಿ ಸದಸ್ಯ ಜಗದೀಶ್ ಶೆಟ್ಟರ್, ಯಾರ ಮೇಲಾದರೂ ಆರೋಪ ಮಾಡುವ ಮೊದಲೇ ನೋಟಿಸ್ ನೀಡಬೇಕು. ಅಲ್ಲದೆ, ಅದಕ್ಕೆ ಪೂರಕ ದಾಖಲೆ ನೀಡಬೇಕು. ಸಚಿವ ಸ್ಥಾನದಲ್ಲಿರುವವರು ಬೇಜವಾಬ್ದಾರಿ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

‘ಪರಪ್ಪನ ಅಗ್ರಹಾರದಲ್ಲಿ ಕೂತವರು ಸತ್ಯಹರಿಶ್ಚಂದ್ರನ ಕಥೆ ಹೇಳಿದಂತೆ ಆಗುತ್ತಿದೆ. ಎಫ್‌ಐಆರ್, ತನಿಖೆ, ವಿಚಾರಣೆ ಎಲ್ಲವೂ ಇಲ್ಲೇ ನಡೆಸಿದರೆ ತನಿಖಾ ಸಂಸ್ಥೆಗಳಿಗೆ ಏನು ಕೆಲಸ. ಸದನದಲ್ಲಿ ಮನಸೋ ಇಚ್ಛೆ ಮಾತನಾಡಬಹುದೇ’

-ಮಾಧುಸ್ವಾಮಿ, ಬಿಜೆಪಿ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News