ರುದ್ರಭೂಮಿಗಳ ಸ್ವಚ್ಛತೆಗೆ ಅಂದಾಜು ವೆಚ್ಚ ಪಟ್ಟಿ ಸಿದ್ಧಪಡಿಸಿ: ಮೇಯರ್ ಗಂಗಾಂಬಿಕೆ

Update: 2019-07-22 15:50 GMT

ಬೆಂಗಳೂರು, ಜು.22: ನಗರ ಕೇಂದ್ರ ಭಾಗದ ಮೂರು ವಲಯಗಳಲ್ಲಿ ಬರುವ ಎಲ್ಲ ರುದ್ರಭೂಮಿಗಳಲ್ಲಿ ಸ್ವಚ್ಛತೆ ಕಾಪಾಡಲು ಎಷ್ಟು ವೆಚ್ಚ ತಗಲುತ್ತದೆ ಎಂಬುದರ ಬಗ್ಗೆ ವಾರದೊಳಗಾಗಿ ಅಂದಾಜು ಪಟ್ಟಿ ಸಿದ್ಧಪಡಿಸುವಂತೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರುದ್ರಭೂಮಿಗಳಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ಉತ್ಪತ್ತಿಯಾಗುವ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ, ಡೆಂಗ್ ಪ್ರಕರಣ ತಡೆಯುವ ಹಾಗೂ ಶೆಡ್ಡರ್ ಮತ್ತು ಚಾಪರ್ ಯಂತ್ರ ಅಳವಡಿಕೆ ಕುರಿತಂತೆ ಮಲ್ಲೇಶ್ವರಂನ ಐಪಿಪಿ ತರಬೇತಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಿದ್ಯುತ್ ಚಿತಾಗಾರಗಳು ಸೇರಿದಂತೆ ಒಟ್ಟು 251 ರುದ್ರಭೂಮಿಗಳಿವೆ. ಈ ಪೈಕಿ ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಲಯದಲ್ಲಿ 68 ರುದ್ರಭೂಮಿಗಳು ಬರಲಿದ್ದು, ಈ ಎಲ್ಲ ರುದ್ರಭೂಮಿಗಳಲ್ಲಿ ಕೂಡಲೆ ಸ್ವಚ್ಛತೆ ಮಾಡಲು ಕ್ರಮವಹಿಸಬೇಕು. ಈ ಸಂಬಂಧ ಎಷ್ಟು ವೆಚ್ಚ ತಗಲುತ್ತದೆ ಎಂಬ ಅಂದಾಜು ಮೊತ್ತದ ಪಟ್ಟಿಯನ್ನು ಸಿದ್ಧಪಡಿಸಿ ವರದಿ ಕೊಡಿ. ಅದಕ್ಕೆ ವ್ಯಯವಾಗುವ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಲಾಗುವುದು. ಬಳಿಕ ಯಂತ್ರೋಪಕರಣಗಳು, ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಂಡು ತ್ವರಿತವಾಗಿ ಸ್ವಚ್ಛತೆ ಮಾಡಬೇಕು ಎಂದು ತಿಳಿಸಿದರು.

ರುದ್ರಭೂಮಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸ್ಥಳದಲ್ಲಿಯೇ ಗೊಬ್ಬರವನ್ನಾಗಿ ಪರಿವರ್ತಿಸಲು ಪ್ರಾಯೋಗಿಕವಾಗಿ ಐದು ರುದ್ರಭೂಮಿಗಳಲ್ಲಿ ಮೆಶ್ ಕಾಂಪೋಸ್ಟ್ ಘಟಕಗಳನ್ನು ತಯಾರಿಸುವ ವಿಚಾರದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಅದಕ್ಕೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ ಹರಿಶ್ಚಂದ್ರ ಘಾಟ್, ವಿಲ್ಸನ್ ಗಾರ್ಡನ್, ಶಾಂತಿನಗರ, ಹಲಸೂರು ಹಾಗೂ ನಂದಿದುರ್ಗದಲ್ಲಿರುವ ರುದ್ರಭೂಮಿಗಳಲ್ಲಿ ಮೆಶ್ ಕಾಂಪೋಸ್ಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರ ಕೆಲಸ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಡೆಂಗ್ ತಡೆಯಲು ಸಭೆ ನಡೆಸಿ: ನಗರದಲ್ಲಿ ಡೆಂಗ್ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಎಲ್ಲ 198 ವಾರ್ಡ್‌ಗಳಲ್ಲಿ ಆರೋಗ್ಯಾಧಿಕಾರಿಗಳು ಆಯಾ ಪಾಲಿಕೆ ಸದಸ್ಯರುಗಳು ಹಾಗೂ ಸೊಳ್ಳೆ ನಿಯಂತ್ರಣ ಮಾಡಲು ಗುತ್ತಿಗೆ ಪಡೆದಿರುವ ಗುತ್ತಿಗೆದಾರರ ಜೊತೆ ಸಭೆ ಆಯೋಜಿಸಿ ಎಲ್ಲೆಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳಿವೆ ಎಂಬುದರ ಬಗ್ಗೆ ಪಟ್ಟಿ ಸಿದ್ದಪಡಿಸಿ ಎಂದು ಹೇಳಿದರು.

ಫಾಗಿಂಗ್ ಮಾಡುವ ಮೂಲಕ ಪರಿಣಾಮಕಾರಿಯಾಗಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿಯಂತ್ರಿಸಿ. ಗುತ್ತಿಗೆದಾರರು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಲ್ಲಿ ನಮಗೆ ಮಾಹಿತಿ ಕೊಡಿ. ಅವರಿಗೆ ನೀಡಿರುವ ಗುತ್ತಿಗೆ ರದ್ದುಪಡಿಸುವ ಜೊತೆಗೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮೇಯರ್ ಎಲ್ಲ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಶೆಡ್ಡರ್ ಮತ್ತು ಚಾಪರ್ ಯಂತ್ರ ಅಳವಡಿಕೆ: ಬಿಬಿಎಂಪಿ 198 ವಾರ್ಡ್‌ಗಳಲ್ಲಿ ಶೆಡ್ಡರ್ ಮತ್ತು ಚಾಪರ್ ಯಂತ್ರ(ಮರದ ಎಲೆ ಪುಡಿ ಮಾಡುವ ಯಂತ್ರ)ಗಳನ್ನು ಆಗಸ್ಟ್ ಒಂದರೊಳಗಾಗಿ ಅಳವಡಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಮೇಯರ್ ಗಂಗಾಂಬಿಕೆ ಘನತ್ಯಾಜ್ಯ ವಿಭಾಗದ ಮುಖ್ಯ ಎಂಜಿನಿಯರ್‌ಗೆ ತಾಕೀತು ಮಾಡಿದರು. ಇದೇ ವೇಳೆ ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ಅವಶ್ಯಕತೆ ಇರುವ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುವ ಬಗ್ಗೆ ಏನು ಕ್ರಮ ಕೈಕೊಂಡಿದ್ದೀರಾ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಅವರು, ಈಗಾಗಲೇ ಹಲವು ವಾರ್ಡ್‌ಗಳಲ್ಲಿ ಸ್ಥಳ ಗುರುತಿಸಲಾಗಿದ್ದು, ಕೂಡಲೇ ಕೆಲಸ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಆಡಳಿತ ಪಕ್ಷದ ನಾಯಕರು, ಮುಖ್ಯ ಆರೋಗ್ಯಾಧಿಕಾರಿಗಳು, ಆರೋಗ್ಯಾಧಿಕಾರಿಗಳು, ತೋಟಗಾರಿಕಾ ಉಪ ನಿರ್ದೇಶಕರು, ತೋಟಗಾರಿಕಾ ಅದೀಕ್ಷಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News