ವಿಧಾನಪರಿಷತ್‌ ನಲ್ಲಿ ನಿಲ್ಲದ ಗದ್ದಲ, ವಾಗ್ವಾದ: ಸಿಎಂ ರಾಜೀನಾಮೆಗೆ ಆಗ್ರಹ

Update: 2019-07-22 15:59 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.22: ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಳಿದು ವಿಶ್ವಾಸಮತ ಕಳೆದುಕೊಂಡಿರುವ ಮೈತ್ರಿ ಸರಕಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಬೇಕೆಂದು ಧರಣಿ ನಡೆಸಿದರು.

ಸೋಮವಾರ ಪ್ರತಿಪಕ್ಷದ ಸದಸ್ಯರು ಕಳೆದ ಆರು ದಿನದಿಂದ ನಡೆಸುತ್ತಿರುವ ಧರಣಿಯನ್ನು ಇಂದೂ ಮುಂದುವರೆಸಿದರು. ಬಹುಮತ ಕಳೆದುಕೊಂಡಿರುವ ಮೈತ್ರಿ ಸರಕಾರ ಅಧಿಕಾರದಲ್ಲಿ ಮುಂದುವರೆಯಬಾರದು. ಕೂಡಲೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ಕೊಡಲಿ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದ ಐವಾನ್ ಡಿಸೋಜಾ ಹಾಗೂ ಎಚ್.ಎಂ.ರೇವಣ್ಣ, ಕಳೆದ ಒಂದು ವಾರದಿಂದ ಬಿಜೆಪಿ ಸದಸ್ಯರು ಧರಣಿ ನಡೆಸುವ ಮೂಲಕ ಸದನದ ಕಲಾಪವನ್ನು ಹಾಳು ಮಾಡುತ್ತಿದ್ದಾರೆಂದು ಬಿಜೆಪಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.

ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ಗದ್ದಲದ ನಡುವೆ ಸಭಾ ನಾಯಕಿ ಡಾ.ಜಯಮಾಲಾ ವಿವಿಧ ಸಮಿತಿಗಳಿಗೆ ಚುನಾವಣಾ ಪ್ರಸ್ತಾವವನ್ನು ಸದನದಲ್ಲಿ ಓದಲಾರಂಭಿಸಿದರು. ಸರಕಾರಿ ಭರವಸೆಗಳ ಸಮಿತಿಗೆ 9 ಜನ ಸದಸ್ಯರು, ಹಕ್ಕು ಬಾಧ್ಯತಾ ಸಮಿತಿಗೆ 7 ಮಂದಿ ಸದಸ್ಯರು, ವಸತಿ ಸಮಿತಿಗೆ 5 ಮಂದಿ ಸದಸ್ಯರುಗಳ ಖಾಸಗಿ ವಿಧೇಯಕಗಳು ಮತ್ತು ನಿರ್ಣಯಗಳ ಸಮಿತಿಗೆ 8 ಮಂದಿ ಸದಸ್ಯರನ್ನು ಪ್ರಾತಿನಿಧ್ಯದ ಅನುಸಾರವಾಗಿ ಏಕಮತದ ಮೂಲಕ ಚುನಾಯಿಸಿಬೇಕೆಂದು ಸದನದ ಮುಂದೆ ಗದ್ದಲದ ನಡುವೆಯೇ ಚುನಾವಣಾ ಪ್ರಸ್ತಾವಗಳನ್ನು ಮುಂದಿಟ್ಟರು.

ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿಗೆ 5 ಮಂದಿ. ಸಾರ್ವಜನಿಕ ಉದ್ಯಮಿಗಳ ಸಮಿತಿಗೆ 5 ಮಂದಿ, ಅಧೀನ ಶಾಸನ ರಚನಾ ಸಮಿತಿಗೆ 5 ಮಂದಿ, ಅನುಸೂಚಕ ಜಾತಿ ಮತ್ತು ಅನುಸೂಚಕ ಪಂಗಡಗಳ ಕಲ್ಯಾಣ ಸಮಿತಿಗೆ 5 ಮಂದಿ ಹಾಗೂ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗೆ 5 ಸದಸ್ಯರನ್ನು ಏಕ ಮತದ ಮೂಲಕ ಚುನಾಯಿಸಬೇಕೆಂದು ಚುನಾವಣಾ ಪ್ರಸ್ತಾವಗಳನ್ನು ಗದ್ದಲದ ನಡುವೆಯೇ ಓದಿ ಕುಳಿತರು.

ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಮಾತನಾಡಲು ಪ್ರಾರಂಭಿಸುತ್ತಿದ್ದಂತೆ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ ಸದನವನ್ನು ನಾಳೆ 11.30ಕ್ಕೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News