ಭಾರತಕ್ಕೆ ಎಬೋಲಾ ಸೇರಿ 10 ವೈರಸ್ ರೋಗ ಭೀತಿ ?

Update: 2019-07-23 03:48 GMT

ಹೊಸದಿಲ್ಲಿ: ಹಲವು ದೇಶಗಳನ್ನು ಬೆಚ್ಚಿ ಬೀಳಿಸಿದ ಎಬೋಲಾದಂಥ ಮಾರಕ ವೈರಸ್ ರೋಗ ಭಾರತಕ್ಕೆ ದಾಳಿ ಇಟ್ಟಿಲ್ಲ ಎಂದು ನೆಮ್ಮದಿಯಿಂದ ಕೂರುವಂತಿಲ್ಲ.

ಎಬೋಲಾ ಸೇರಿದಂತೆ 10 ಹೊಸ ವೈರಸ್ ರೋಗಗಳು ಭಾರತದ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಭಾರತದ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಎಚ್ಚರಿಸಿದೆ.

ಇದರಲ್ಲಿ ಎಬೋಲಾ, ಎಂಇಆರ್‌ಎಸ್-ಸಿಒವಿ, ಹಳದಿ ಜ್ವರ ಮತ್ತು ಹಕ್ಕಿಜ್ವರ ಪ್ರಮುಖವಾಗಿವೆ.

"ಹೆಚ್ಚಿದ ಅಂತರ್ ರಾಷ್ಟ್ರೀಯ ಪ್ರಯಾಣದಿಂದಾಗಿ ಈ ರೋಗಗಳು ಭಾರತವನ್ನು ತಲುಪುವ ಸಾಧ್ಯತೆಯೂ ಅಧಿಕವಾಗಿದೆ. ಆದ್ದರಿಂದ ತುರ್ತು ಸಂದರ್ಭಗಳಿಗಾಗಿ ಸಿದ್ಧತೆ ಮಾಡಿಕೊಳ್ಳುವುದು ಅಗತ್ಯ. ಎಬೋಲಾ ವ್ಯಾಪಕವಾಗಿರುವ ಉಗಾಂಡದಲ್ಲಿ 30 ಸಾವಿರ ಭಾರತೀಯರಿದ್ದಾರೆ. ಅಂತೆಯೇ ನಮ್ಮ ಸೇನೆಯ ಹಲವು ಮಂದಿ ಯೋಧರು ಕಾಂಗೋ ಗಣರಾಜ್ಯದಲ್ಲಿದ್ದಾರೆ. ಇಲ್ಲಿ ಕೂಡಾ ವೈರಲ್ ಸೋಂಕು ವ್ಯಾಪಕವಾಗಿದೆ" ಎಂದು ಐಸಿಎಂಆರ್ ಮಹಾ ನಿರ್ದೇಶಕ ಡಾ. ಬಲರಾಂ ಭಾರ್ಗವ ಹೇಳಿದ್ದಾರೆ.

ಎಬೋಲಾ ಮಾರಕ ಸೋಂಕು ರೋಗವಾಗಿದ್ದು, ಇದು ದೇಹದ ಸ್ರಾವಗಳ ಮೂಲಕ ಹರಡುತ್ತದೆ. ಬಾಹ್ಯ ಹಾಗೂ ಆಂತರಿಕ ರಕ್ತಸ್ರಾವಕ್ಕೆ ಈ ಜ್ವರ ಕಾರಣವಾಗುತ್ತದೆ. ಶೇಕಡ 70ರಷ್ಟು ಪ್ರಕರಣಗಳಲ್ಲಿ ಸಾವು ಸಂಭವಿಸುತ್ತದೆ.

ಎಂಇಆರ್‌ಎಸ್-ಸಿಒವಿ ಅಥವಾ ಮಿಡ್ಲ್‌ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ ಕೊರೊನಾವೈರಸ್ 2012ರಲ್ಲಿ ಸೌದಿ ಅರೇಬಿಯಾದಲ್ಲಿ ಮೊತ್ತ ಮೊದಲು ಕಾಣಿಸಿಕೊಂಡ ಬಳಿಕ 26 ದೇಶಗಳಿಗೆ ಹಬ್ಬಿದೆ. ಇದು ತೀವ್ರ ಉಸಿರಾಟ ತೊಂದರೆ ಹಾಗೂ ಬಹು ಅಂಗಾಂಗ ವೈಫಲ್ಯಕ್ಕೆ ಕಾರಣವಾಗುತ್ತದೆ. ಇದುವರೆಗೆ ಈ ರೋಗ ಭಾರತದಲ್ಲಿ ಪತ್ತೆಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News