ಇಂಗ್ಲೆಂಡ್‌ನ ಆ್ಯಂಡರ್ಸನ್ ಅಲಭ್

Update: 2019-07-23 18:51 GMT

ಲಂಡನ್, ಜು.23: ಐರ್ಲೆಂಡ್ ವಿರುದ್ಧ ಬುಧವಾರ ಆರಂಭವಾಗಲಿರುವ ನಾಲ್ಕು ದಿನಗಳ ಟೆಸ್ಟ್ ಪಂದ್ಯದಿಂದ ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಹೊರಗುಳಿದಿದ್ದಾರೆ. ಆ್ಯಂಡರ್ಸನ್ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಜು.2 ರಂದು ಡುಹ್ರಾಮ್ ವಿರುದ್ಧ ಲಂಕಾಶೈರ್ ಕೌಂಟಿ ಪರ ಆಡುತ್ತಿದ್ದಾಗ ಆ್ಯಂಡರ್ಸನ್‌ಗೆ ಗಾಯದ ಸಮಸ್ಯೆ ಕಾಣಿಸಿಕೊಂಡಿದ್ದು, ಆ ಗಾಯದಿಂದ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಆಗಸ್ಟ್ 1 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿರುವ ಆ್ಯಶಸ್ ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಮ್ಮಿ ಅವರ ಫಿಟ್ನೆಸ್ ಬಗ್ಗೆ ನಿಗಾವಹಿಸಲಾಗುವುದು ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಇಂಗ್ಲೆಂಡ್‌ನ ಮಾರ್ಕ್ ವುಡ್ ಹಾಗೂ ಜೋಫ್ರಾ ಅರ್ಚರ್ ಗಾಯದ ಸಮಸ್ಯೆ ಎದುರಿಸುತ್ತಿದ್ದು, ಐರ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.

  36ರ ಹರೆಯದ ಆ್ಯಂಡರ್ಸನ್ ಅವರು ಇನ್ನು ಮುಂದೆ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವುದಿಲ್ಲ. ಹೀಗಾಗಿ ಅವರು ವಿಶ್ವಕಪ್‌ನಲ್ಲಿ ಭಾಗವಹಿಸಿರಲಿಲ್ಲ. ಲಂಕಾಶೈರ್‌ನ ಸ್ವಿಂಗ್ ಬೌಲರ್ ಟೆಸ್ಟ್‌ನಲ್ಲಿ 575 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮೂರು ಸ್ಪಿನ್ನರ್‌ಗಳಾದ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್(800 ವಿಕೆಟ್), ಆಸ್ಟ್ರೇಲಿಯದ ಶೇನ್ ವಾರ್ನ್(708) ಹಾಗೂ ಭಾರತದ ಅನಿಲ್ ಕುಂಬ್ಳೆ(619)ಸಾರ್ವಕಾಲಿಕ ಶ್ರೇಷ್ಠ ವಿಕೆಟ್ ಗಳಿಕೆಯಲ್ಲಿ ಮೊದಲ ಮೂರು ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News