ಅರ್ಜುನ ಪ್ರಶಸ್ತಿ ಶಿಫಾರಸು ಪಟ್ಟಿಯಲ್ಲಿ ದ್ಯುತಿ ಚಂದ್ ಹೆಸರಿಲ್ಲ

Update: 2019-07-24 05:51 GMT

ಹೊಸದಿಲ್ಲಿ, ಜು.24: ಸ್ಟಾರ್ ಓಟಗಾರ್ತಿ ದ್ಯುತಿ ಚಂದ್ ಹೆಸರನ್ನು ಈ ವರ್ಷದ ಅರ್ಜುನ ಪ್ರಶಸ್ತಿ ಶಿಫಾರಸು ಪಟ್ಟಿಯಿಂದ ಹೊರಗಿಡಲಾಗಿದೆ. ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ ಸಲ್ಲಿಸಿರುವ ಅರ್ಜಿಯನ್ನು ಕ್ರೀಡಾ ಸಚಿವಾಲಯ ತಿರಸ್ಕರಿಸಿದೆ. ಪುರುಷರ 800 ಮೀ. ಓಟದಲ್ಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಮಂಜೀತ್ ಸಿಂಗ್ ಅರ್ಜುನ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ.

ಖೇಲ್‌ರತ್ನ ಹಾಗೂ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲ್ಪಟ್ಟಿರುವ ಅಥ್ಲೀಟ್‌ಗಳ ಹೆಸರನ್ನು ಪಟ್ಟಿ ಮಾಡುವುದರಲ್ಲಿ ಸಚಿವಾಲಯ ನಿರತವಾಗಿದ್ದು, ಆಯ್ದ ಹೆಸರುಗಳನ್ನು ಅಂತಿಮ ರೂಪ ನೀಡಲು ಕ್ರೀಡಾ ಸಚಿವ ಕಿರಣ್ ರಿಜಿಜುಗೆ ಕಳುಹಿಸಿಕೊಡಲಾಗುತ್ತದೆ.

ಬಿಸಿಸಿಐ ಈಬಾರಿ ವೇಗದ ಬೌಲರ್‌ಗಳಾದ ಜಸ್‌ಪ್ರಿತ್ ಬುಮ್ರಾ ಹಾಗೂ ಮುಹಮ್ಮದ್ ಶಮಿ, ಆಲ್‌ರೌಂಡರ್ ರವೀಂದ್ರ ಜಡೇಜ ಹಾಗೂ ಮಹಿಳಾ ಕ್ರಿಕೆಟರ್ ಪೂನಂ ಯಾದವ್ ಹೆಸರುಗಳನ್ನು ಅರ್ಜುನ ಪ್ರಶಸ್ತಿಗೆ ಕಳುಹಿಸಿಕೊಟ್ಟಿದೆ. ಈ ವರ್ಷದ ಖೇಲ್‌ರತ್ನಕ್ಕೆ ಯಾರೊಬ್ಬರ ಹೆಸರನ್ನು ಶಿಫಾರಸು ಮಾಡಿಲ್ಲ. ಹರ್ಭಜನ್ ಸಿಂಗ್ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗಾಗಿ ಪಂಜಾಬ್ ಸರಕಾರ ಕಳುಹಿಸಿಕೊಟ್ಟಿತ್ತು. ಆದರೆ, ಸಚಿವಾಲಯ ಜೂ.25ರಂದು ಅರ್ಜಿಯನ್ನು ಸ್ವೀಕರಿಸಿತ್ತು. ಅರ್ಜಿ ಕಳುಹಿಸಲು ಎಪ್ರಿಲ್ 30 ಕೊನೆಯ ದಿನವಾಗಿತ್ತು.

ನಿಯಮದ ಪ್ರಕಾರ ಕ್ರೀಡಾ ಒಕ್ಕೂಟ ಕೇವಲ ಮೂವರ ಹೆಸರನ್ನು ಪ್ರಶಸ್ತಿಗೆ ಕಳುಹಿಸಿಕೊಡಬೇಕು. ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಒಟ್ಟು 5 ಹೆಸರುಗಳನ್ನು ಕಳುಹಿಸಿಕೊಟ್ಟಿದೆ. ಶಾಟ್‌ಪುಟ್ ಪಟು ತೇಜಿಂದರ್ ಸಿಂಗ್ ತೂರ್, ಹೆಪ್ಟಾಥ್ಲೀಟ್ ಸ್ವಪ್ನಾ ಬರ್ಮನ್ ಹಾಗೂ ಟ್ರಿಪಲ್ ಜಂಪರ್ ಅರ್ಪಿಂದರ್ ಸಿಂಗ್, ದ್ಯುತಿ ಹಾಗೂ ಮಂಜೀತ್ ಹೆಸರನ್ನು ಕಳುಹಿಕೊಟ್ಟಿದೆ. ಪ್ರದರ್ಶನ ಪಟ್ಟಿಯ ರ್ಯಾಂಕಿಂಗ್‌ನಲ್ಲಿ ನಾಲ್ಕನೇ ಹಾಗೂ 5ನೇ ಸ್ಥಾನ ಪಡೆದಿರುವ ಚಂದ್ ಹಾಗೂ ಸಿಂಗ್ ಪ್ರಶಸ್ತಿಯ ನಾಮನಿರ್ದೇಶನ ಪಟ್ಟಿಯಿಂದ ಹೊರಗುಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News