ಖಾಸಗಿ ವೈದ್ಯ ಕಾಲೇಜುಗಳಿಗೆ ಜಾಕ್‌ಪಾಟ್ !

Update: 2019-07-24 05:31 GMT

ಹೊಸದಿಲ್ಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ- 2019 ಯಥಾಸ್ಥಿತಿಯಲ್ಲಿ ಆಂಗೀಕಾರವಾದರೆ ಖಾಸಗಿ ವೈದ್ಯ ಕಾಲೇಜುಗಳಿಗೆ ಭರಪೂರ ಕೊಡುಗೆಯಾಗಲಿದೆ.

ನೂತನ ಮಸೂದೆ ಅನ್ವಯ, ರಾಷ್ಟ್ರೀಯ ವೈದ್ಯಕೀಯ ಆಯೋಗ ಖಾಸಗಿ ವೈದ್ಯ ಕಾಲೆಜುಗಳ ಶೇಕಡ 50ರಷ್ಟು ಸೀಟುಗಳಿಗೆ ಮಾತ್ರ ಶುಲ್ಕ ನಿಗದಿಪಡಿಸುವ ಅಧಿಕಾರ ಹೊಂದಿದ್ದು, ಉಳಿದ ಸೀಟುಗಳಿಗೆ ಕಾಲೇಜುಗಳೇ ಶುಲ್ಕ ನಿಗದಿಪಡಿಸಬಹುದಾಗಿದೆ. ಪ್ರಸ್ತುತ ಖಾಸಗಿ ಕಾಲೇಜುಗಳು ವಿಧಿಸಬಹುದಾದ ಶುಲ್ಕಕ್ಕೆ ಬಹುತೇಕ ರಾಜ್ಯಗಳಲ್ಲಿ ಗರಿಷ್ಠ ಮಿತಿ ಇದೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ನಿಗದಿ ಅಧಿಕಾರವು ಅವ್ಯವಹಾರ ಮತ್ತು ಸೀಟುಗಳ ಹರಾಜಿಗೆ ಕಾರಣವಾಗಲಿದೆ ಎಂದು ರಾಜ್ಯ ಸರ್ಕಾರಗಳು ಮತ್ತು ಇತರ ಹಕ್ಕುದಾರರು ವ್ಯಕ್ತಪಡಿಸಿದ ಆತಂಕವನ್ನು ಕಡೆಗಣಿಸಿ, ಮಸೂದೆಯನ್ನು ಯಥಾವತ್ತಾಗಿ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಎನ್‌ಎಂಸಿ ಮಸೂದೆ-2017ರ ಪರಾಮರ್ಶೆ ನಡೆಸಿದ ಸಂಸದೀಯ ಸ್ಥಾಯಿ ಸಮಿತಿ ಹಲವು ಹಕ್ಕುದಾರರ ಅಹವಾಲುಗಳನ್ನು ಆಲಿಸಿ, ಖಾಸಗಿ ಕಾಲೇಜುಗಳ ಶುಲ್ಕ ನಿಗದಿಯಲ್ಲಿ ಪ್ರಸ್ತುತ ರಾಜ್ಯ ಸರ್ಕಾರಗಳಿಗೆ ಇರುವ ನಿಯಂತ್ರಣಾಧಿಕಾರವನ್ನು ದುರ್ಬಲಗೊಳಿಸಬಾರದು ಎಂದು 2018ರ ಮಾರ್ಚ್‌ನಲ್ಲಿ ಶಿಫಾರಸ್ಸು ಮಾಡಿತ್ತು.

ಸ್ವಾಯತ್ತ ವಿವಿ ಹಾಗೂ ಸ್ವಾಯತ್ತವಾಗಲಿರುವ ವಿವಿಗಳ ಶುಲ್ಕ ನಿಯಂತ್ರಣಕ್ಕೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಇಂಥ ಸಂಸ್ಥೆಗಳ ಕನಿಷ್ಠ ಶೇಕಡ 50ರಷ್ಟು ಸೀಟುಗಳ ಶುಲ್ಕ ನಿಯಂತ್ರಿಸಬೇಕು ಎಂದು ಸಲಹೆ ಮಾಡಿತ್ತು.

ಆದರೆ ಲೋಕಸಭೆಯಲ್ಲಿ ಮಂಡಿಸಲಾದ ಮಸೂದೆಯಲ್ಲಿ ಎನ್‌ಎಂಸಿ ಅಧಿಕಾರದಲ್ಲಿ ಖಾಸಗಿ ಸಂಸ್ಥೆಗಳು ಮತ್ತು ಸ್ವಾಯತ್ತ ವಿವಿಗಳ ಶೇಕಡ 50ರಷ್ಟು ಸೀಟುಗಳಿಗೆ ಶುಲ್ಕ ನಿಗದಿಪಡಿಸುವ ಸಂಬಂಧ ಮಾರ್ಗ ಸೂಚಿ ರೂಪಿಸುವ ಅಧಿಕಾರ ಸೇರಿರುತ್ತದೆ. 2017ರಲ್ಲಿ ನಿಗದಿಪಡಿಸಿದ್ದ ಶೇಕಡ 40 ಸೀಟುಗಳ ಬದಲಾಗಿ ಇದೀಗ ಶೇಕಡ 50 ಎಂದು ನಿಗದಿಪಡಿಸಲಾಗಿದ್ದರೂ, ಸಂಸದೀಯ ಸಮಿತಿಯ ಶಿಫಾರಸ್ಸುಗಳನ್ನು ದುರ್ಬಲಗೊಳಿಸಲಾಗಿದೆ.

ರಾಜ್ಯಸಭೆಯಲ್ಲಿ ಈ ಸಂಬಂಧ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸಮಿತಿ ಸದಸ್ಯ ಜೈರಾಮ್ ರಮೇಶ್, "ದೇಶದಲ್ಲಿ ವೈದ್ಯ ಶಿಕ್ಷಣದ ಶುಲ್ಕ ದುಬಾರಿಯಾಗಿದ್ದು, ಪ್ರತಿ ರಾಜ್ಯ ಸರ್ಕಾರಗಳು ಶುಲ್ಕ ನಿಗದಿಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಬೇಕು" ಎಂದು ಆಗ್ರಹಿಸಿದ್ದರು.

ಹಲವು ರಾಜ್ಯ ಸರ್ಕಾರಗಳು ಕೂಡ ಇದೇ ವಾದ ಮಂಡಿಸಿವೆ. ಉದಾಹರಣೆಗೆ ಒಡಿಶಾದಲ್ಲಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ಶುಲ್ಕ ನಿಗದಿಪಡಿಸುತ್ತಿದ್ದು, ಶೇಕಡ 85ರಷ್ಟು ಸರ್ಕಾರಿ ಕೋಟಾಗೆ ಒಂದು ಶುಲ್ಕವಿದ್ದರೆ, ಉಳಿದ ಶೇಕಡ 15ರಷ್ಟು ಎನ್‌ಆರ್‌ಐ ಸೀಟುಗಳಿಗೆ ನಾಲ್ಕು ಪಟ್ಟು ಶುಲ್ಕ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News