ಜು.29 ರಿಂದ ವಿಜ್ಞಾನ ವಸ್ತು ಪ್ರದರ್ಶನ ‘ವಿಜ್ಞಾನ್ ಸಮಾಗಮ್’
ಬೆಂಗಳೂರು, ಜು.24: ನಿರೀಕ್ಷಿತ ಜಾಗತಿಕ ಮೆಗಾ ವಿಜ್ಞಾನ ಬೃಹತ್ ವಸ್ತು ಪ್ರದರ್ಶನವಾದ ‘ವಿಜ್ಞಾನ್ ಸಮಾಗಮ್’ ಜು.29 ರಿಂದ ನಡೆಯಲಿದೆ ಎಂದು ಪರಮಾಣು ಶಕ್ತಿ ಇಲಾಖೆ(ಡಿಎಇ) ಮುಖ್ಯಸ್ಥ ಡಾ.ರಂಜಿತ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕಸ್ತೂರ ಬಾ ರಸ್ತೆಯ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ಆವರಣದೊಳಗೆ ಜು.29 ರಿಂದ ಆರಂಭವಾಗಲಿರುವ ಸಮಾಗಮ್ ಸೆಪ್ಟೆಂಬರ್ 28 ರವರೆಗೂ ನಡೆಯಲಿದೆ ಎಂದು ತಿಳಿಸಿದರು.
ಸಮಾಗಮ್ ಅನ್ನು ವಿಜ್ಞಾನ-ತಂತ್ರಜ್ಞಾನ ಇಲಾಖೆ, ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯ ಹಾಗೂ ಕೇಂದ್ರೀಯ ಸಂಸ್ಕೃತಿ ಸಚಿವಾಲಯ ಸಹಯೋಗದೊಂದಿಗೆ ನಡೆಯಲಿದೆ. ಕಾರ್ಯಕ್ರಮವನ್ನು ರಾಜೀವ್ ಗಾಂಧಿ ವಿಜ್ಞಾನ ಮತ್ತು ತಂತ್ರಜ್ಞಾನ ಆಯೋಗದ ಅಧ್ಯಕ್ಷ ಡಾ.ಅನಿಲ್ ಕಾಕೋಡ್ಕರ್ ಉದ್ಘಾಟಿಸಲಿದ್ದು, ಡಿಎಸ್‌ಡಿ ಕಾರ್ಯದರ್ಶಿ ಪ್ರೊ.ಅಶುತೋಷ್ ಶರ್ಮಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.
ವಿಜ್ಞಾನ ಸಮಾಗಮ್‌ನಲ್ಲಿ ದೇಶ ಹಾಗೂ ವಿದೇಶಗಳಿಂದ ವಿಜ್ಞಾನಿಗಳು ಪಾಲ್ಗೊಳ್ಳಲಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ರಂಗದಲ್ಲಿ ಮುಂಚೂಣಿಯಲ್ಲಿರುವ ರೋಮಾಂಚಕಾರಿ ಪ್ರಪಂಚದ ಬಗ್ಗೆ ಮಾಹಿತಿ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ. ವಿಶ್ವಕ್ಕೆ ನಮ್ಮ ದೇಶ ನೀಡುತ್ತಿರುವ ವಿಜ್ಞಾನದ ಕೊಡುಗೆಗಳ ಕುರಿತು ತಿಳಿಸಲು ಹಾಗೂ ಭಾರತ ಮತ್ತು ಜಾಗತಿಕ ಸ್ನೇಹಿತರ ನಡುವೆ ಸಂವಹನದ ಸೇತುವೆಯನ್ನು ಏರ್ಪಡಿಸಲು ಈ ವೇದಿಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಪಾಲ್ಗೊಳ್ಳಲಿರುವ ಸಂಸ್ಥೆಗಳು: ವಿಜ್ಞಾನ ಸಮಾಗಮ್‌ನಲ್ಲಿ ಪ್ರತಿಷ್ಠಿತ ಸಂಸ್ಥೆಗಳಾದ ಸಿಇಆರ್‌ಎನ್, ಎಫ್‌ಎಐಆರ್, ಐಎನ್‌ಒ, ಐಟಿಇಆರ್, ಎಲ್‌ಐಜಿಒ, ಎಂಎಸಿಇ, ಟಿಎಂಟಿ ಮತ್ತು ಎಸ್‌ಕೆಎನಂತಹ ಸಂಸ್ಥೆಗಳು ಪಾಲ್ಗೊಳ್ಳಲಿವೆ. ಪ್ರೇಕ್ಷಕರು ವಿವಿಧ ವೈಜ್ಞಾನಿಕ ಸಂಸ್ಥೆಗಳು, ಉದ್ಯಮ ಮತ್ತು ಅಕಾಡೆಮಿಗಳ ಆಹ್ವಾನಿತ ಸದಸ್ಯರು ವೀಕ್ಷಕರಾಗಿರಲಿದ್ದಾರೆ. ಪಾಲ್ಗೊಳ್ಳುವ ಎಲ್ಲರೂ ಈ ಮಾತುಕತೆಗಳು, ವಿಜ್ಞಾನ ಪ್ರದರ್ಶನಗಳು, ಸಂವಾದಾತ್ಮಕ ರಸಪ್ರಶ್ನೆ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ವಿವರಿಸಿದರು.
ದಿಲ್ಲಿಯ ಡಿಎಸ್‌ಡಿ ಮುಖ್ಯಸ್ಥ ಡಾ.ಪ್ರವೀರ್ ಅಸ್ತಾನಾ ಮಾತನಾಡಿ, ಸಮಾಗಮ್ ಶಾಲಾ ಮಕ್ಕಳು, ವಿದ್ಯಾರ್ಥಿಗಳು, ಮೂಲಭೂತ ವಿಜ್ಞಾನ ಮತ್ತು ಸಂಶೋಧನೆಗಳನ್ನು ವೃತ್ತಿಯಾಗಿಸಿಕೊಳ್ಳುವವರೊಂದಿಗೆ ಸಂಪರ್ಕ ಸಾಧಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಅಲ್ಲದೆ, ಅಕಾಡೆಮಿ ಹಾಗೂ ಉದ್ಯಮದೊಂದಿಗಿನ ಭಾಷಣ ಹಾಗೂ ಸಂವಾದಗಳು ನಡೆಯಲಿವೆ ಎಂದರು.
ವಿಜ್ಞಾನ್ ಸಮಾಗಮ್‌ನ ವಿಶೇಷಗಳು:
- ವಿಶ್ವದ 7 ಜಾಗತಿಕ ವಿಜ್ಞಾನ ಯೋಜನೆಗಳಿಗೆ ಭಾರತ ನೀಡಿರುವ ಕೊಡುಗೆಯನ್ನು ಬಿಂಬಿಸುವ ವಿಜ್ಞಾನ ಪ್ರದರ್ಶನ
- ಜು.29ರಂದು ಉದ್ಘಾಟನಾ ಸಮಾರಂಭದ ನಂತರ 2 ದಿನಗಳ ವೈಜ್ಞಾನಿಕ ಕಾರ್ಯಕ್ರಮ-ಪ್ರದರ್ಶನ ನಡೆಯಲಿದೆ.
- ವಿಜ್ಞಾನ, ತಂತ್ರಜ್ಞಾನ ಮತ್ತು ಕೈಗಾರಿಕಾ ಕ್ಷೇತ್ರದ ಪ್ರಖ್ಯಾತ ಆಹ್ವಾನಿತ ಭಾಷಣಕಾರರು ಮಾತುಕತೆ.
- ಸಿಲಿಕಾನ್ ಸಿಟಿಯ ಬಳಿಕ ನ.4 ರಿಂದ ಡಿ.31 ರವರೆಗೆ ಸೈನ್ಸ್ ಸಿಟಿಯಲ್ಲಿ ನಡೆಯುವ ಪ್ರದರ್ಶನಕ್ಕೆ ಕೋಲ್ಕತ್ತಾ ಕಡೆಗೆ ಪಯಣ.
- ಮುಂದಿನ ವರ್ಷ ಜ.21 ರಿಂದ ರಾಷ್ಟ್ರೀಯ ವಿಜ್ಞಾನ ಕೇಂದ್ರದಲ್ಲಿ ಪ್ರದರ್ಶನ ನಡೆಯಲಿದ್ದು, 2020 ಮಾ.20 ಕ್ಕೆ ಅಂತ್ಯವಾಗಲಿದೆ.
ನಗರದ ಕಸ್ತೂರ ಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ಆವರಣದೊಳಗೆ ಸಮಾಗಮ್ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ನಡೆಯಲಿದ್ದು, ಎಲ್ಲರಿಗೂ ಉಚಿತ ಪ್ರವೇಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ವೆಬ್‌ಸೈಟ್ www.vigyansamagam.in ನಿಂದ ಸಂಪರ್ಕಿಸಬಹುದಾಗಿದೆ.