ಜನರ ಹಿತಕ್ಕಾಗಿ ನಿರ್ಲಿಪ್ತರಾಗಿ ಕರ್ತವ್ಯ ನಿರ್ವಹಿಸಿ: ಅಧಿಕಾರಿಗಳಿಗೆ ಹಂಗಾಮಿ ಸಿಎಂ ಕುಮಾರಸ್ವಾಮಿ ಸಲಹೆ

Update: 2019-07-24 13:15 GMT

ಬೆಂಗಳೂರು, ಜು. 24: ಹಂಗಾಮಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿಂದು ಸರಕಾರದ ಹಿರಿಯ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಚಹಾಕೂಟದಲ್ಲಿ 14 ತಿಂಗಳ ತನ್ನ ಆಡಳಿತಾವಧಿಯಲ್ಲಿ ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ತಮ್ಮ ಅಧಿಕಾರಾವಧಿಯಲ್ಲಿ ಎರಡು ಆಯವ್ಯಯಗಳ ಮೂಲಕ ರೂಪಿಸಿದ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ನಿಸ್ಪೃಹತೆಯಿಂದ ಶ್ರಮಿಸಿದ್ದಾರೆ ಎಂದ ಕುಮಾರಸ್ವಾಮಿ, ಅಧಿಕಾರಿಗಳ ಕರ್ತವ್ಯ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ರಾಜಕೀಯ ವಿದ್ಯಮಾನಗಳು ಏನೇ ಇದ್ದರೂ ನಿರ್ಲಿಪ್ತರಾಗಿ ಜನಹಿತಕ್ಕಾಗಿ ಕಾರ್ಯನಿರ್ವಹಿಸಿ. ಜನಪ್ರತಿನಿಧಿಗಳನ್ನು ಆಧರಿಸದೆ ಜನಸಾಮಾನ್ಯರ ಹಿತದೃಷ್ಟಿಯಿಂದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು ಎಂದು ಅವರು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಹದಿನಾಲ್ಕು ತಿಂಗಳ ಕಾರ್ಯ ನಿರ್ವಹಣೆಯ ಅವಧಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಿಗಳನ್ನು ಸಹೋದರ ಭಾವದಿಂದ ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯ ನಿರ್ವಹಿಸಿದ್ದರು ಎಂದು ಸ್ಮರಿಸಿದರು.

ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು, ಹಿರಿಯ ಅಧಿಕಾರಿಗಳಾದ ಐಎನ್‌ಎಸ್ ಪ್ರಸಾದ್, ಶಾಲಿನಿ ರಜನೀಶ್ ಸೇರಿದಂತೆ ರಾಜ್ಯ ಸರಕಾರದ ಐಎಎಸ್, ಐಪಿಎಸ್ ಅಧಿಕಾರಿಗಳು ಸಿಎಂ ಚಹಾಕೂಟದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News