ನಿರ್ಗಮನಕ್ಕೂ ಮುನ್ನ ಸಿಹಿ ಸುದ್ದಿ ನೀಡಿದ ಕುಮಾರಸ್ವಾಮಿ: ಋಣಮುಕ್ತ ಕಾಯ್ದೆ ಜಾರಿ

Update: 2019-07-24 14:49 GMT

ಬೆಂಗಳೂರು, ಜು.24: ಖಾಸಗಿ, ಲೇವಾದೇವಿದಾರರಿಂದ ಕೈ ಸಾಲ ಪಡೆದಿರುವ ಸಣ್ಣ ರೈತರು, ದುರ್ಬಲ ವರ್ಗದವರು, ಭೂ ರಹಿತ ಕಾರ್ಮಿಕರು ಋಣಮುಕ್ತರಾಗಲು ಮೈತ್ರಿ ಸರಕಾರ ರೂಪಿಸಿದ್ದ ಋಣಮುಕ್ತ ಕಾಯ್ದೆಗೆ ಜು.16ರಂದು ರಾಷ್ಟ್ರಪತಿಯ ಅಂಕಿತ ದೊರೆತಿದೆ ಎಂದು ಉಸ್ತುವಾರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉಪ ವಿಭಾಗಾಧಿಕಾರಿಗಳನ್ನು ಇದಕ್ಕೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿದ್ದು, 90 ದಿನಗಳೊಳಗೆ ಅರ್ಜಿ ಸಲ್ಲಿಸಿ ಸಂಬಂಧಿಸಿದ ದಾಖಲೆಗಳನ್ನು ಅವರ ಬಳಿ ಸಲ್ಲಿಸಿದ್ದಲ್ಲಿ ಋಣಮುಕ್ತರಾಗಬಹುದು ಎಂದರು.

1.20 ಲಕ್ಷ ರೂ.ಗಳಿಗಿಂತ ಕಡಿಮೆ ವಾರ್ಷಿಕ ಆದಾಯವಿರುವ ಕುಟುಂಬಗಳಿಗೆ ಇದರಿಂದ ಅನುಕೂಲವಾಗಲಿದ್ದು, ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದ ಅವರು, ಈ ಋಣಮುಕ್ತ ಕಾಯ್ದೆಯು ನಾಡಿನ ಜನತೆಗೆ ಮೈತ್ರಿ ಸರಕಾರದ ಕೊಡುಗೆಯಾಗಿದೆ ಎಂದರು.

ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ ರೈತರಿಗೆ ಏನಾದರೂ ಅನುಕೂಲ ಮಾಡಬೇಕೆಂದು, ಅನ್ನದಾತರ ಸಾಲಮನ್ನಾ ಮಾಡಲು ನಿರ್ಧಾರ ಮಾಡಿದೆ. ದೇವರಾಜ ಅರಸು ಅವರ ಕಾಲದಲ್ಲಿ 1976 ರಂದು ಋಣಮುಕ್ತ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ನಾವು ಅದನ್ನು ನಮ್ಮ ಸರಕಾರದಲ್ಲಿ ತಂದಿದ್ದೇವೆ ಎಂದು ಅವರು ಹೇಳಿದರು.

ಅಧಿಕಾರದಿಂದ ನಿರ್ಗಮಿಸುವ ವೇಳೆ ಬಡ ರೈತರಿಗೆ ಅನುಕೂಲವಾಗುವಂತೆ ಋಣಮುಕ್ತ ಕಾಯ್ದೆ ಜಾರಿಗೆ ತಂದದ್ದು, ಆತ್ಮತೃಪ್ತಿಯಿದೆ. ರೈತರು, ಬಡವರು, ಕಾರ್ಮಿಕರಿಗೆ ಈ ಕಾಯ್ದೆ ಅನ್ವಯವಾಗುತ್ತದೆ. ಭೂ ರಹಿತ ಕೃಷಿಕರಿಗೆ ಇದು ವರದಾನವಾಗಲಿದೆ. ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವ ಕೃಷಿಕರಿಗೂ ಇದು ಅನ್ವಯವಾಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ನಿನ್ನೆಯವರೆಗೆ ಎಷ್ಟು ಸಾಲ ಮಾಡಿದ್ದರೂ, ಎಷ್ಟು ವರ್ಷದ ಹಿಂದೆ ಸಾಲ ಮಾಡಿದ್ದರೂ 90 ದಿನಗಳಲ್ಲಿ ಆಯಾ ಉಪವಿಭಾಗಾಧಿಕಾರಿಯನ್ನು ಭೇಟಿಯಾಗಿ ದಾಖಲಾತಿ ಒದಗಿಸಿದರೆ ಸಾಲ ಮನ್ನಾ ಆಗುತ್ತದೆ. ಸಾಲದ ಪ್ರಮಾಣ ಎಷ್ಟಿದ್ದರೂ ಮನ್ನಾ ಆಗಲಿದೆ. ಕೈ ಸಾಲ ಪಡೆದಿರುವವರಿಗೆ, ಲೇವಾದೇವಿಗಾರರ ಬಳಿ ಸಾಲ ಪಡೆದಿರುವವರು, ಪಾನ್ ಬ್ರೋಕರ್ಸ್ ಬಳಿ ಸಾಲ ಪಡೆದಿರುವವರಿಗೆ ಈ ಕಾಯ್ದೆ ಅನ್ವಯವಾಗಲಿದೆ ಎಂದು ಉಸ್ತುವಾರಿ ಮುಖ್ಯಮಂತ್ರಿ ತಿಳಿಸಿದರು.

ಒಂದು ಬಾರಿಗೆ ಸಂಪೂರ್ಣವಾಗಿ ಅವರ ಸಾಲ ಮನ್ನಾ ಆಗಲಿದೆ. ಲೇವಾದೇವಿಗಾರರು ಬಡವರ ರಕ್ತ ಹೀರಿ ಬಡ್ಡಿ ತಿನ್ನುತ್ತಿದ್ದಾರೆ. ಹೀಗಾಗಿಯೇ ನಾವು ಈ ಕಾಯ್ದೆ ಜಾರಿಗೆ ತಂದಿದ್ದೇವೆ. ಈವರೆಗೆ ಖಾಸಗಿ ವ್ಯಕ್ತಿಗಳು ಬಡ್ಡಿ ಹಣವನ್ನು ತಿಂದದ್ದು ಸಾಕು. ಅವರಿಗೆ ಯಾವುದೇ ರೀತಿಯ ಹಣವನ್ನು ಮರು ಪಾವತಿ ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ ಒಂದು ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದ್ದರೂ, ಅಧಿಕಾರಿಗಳು ನಮಗೆ ಸಹಕಾರ ಕೊಟ್ಟಿದ್ದಾರೆ. ಜನಪ್ರತಿನಿಧಿಗಳ ಜವಾಬ್ದಾರಿಗಿಂತ ವಿವಿಧ ಇಲಾಖೆಗಳ ಅಧಿಕಾರಿಗಳ ಜವಾಬ್ದಾರಿ ಪ್ರಮುಖವಾಗಿರುತ್ತದೆ. ಇವತ್ತಿನ ಘಟನಾವಳಿಗಳನ್ನು ನೋಡುತ್ತಿದ್ದರೆ, ರಾಜ್ಯ ರಾಜಕಾರಣದಲ್ಲಿ ಮುಂದೆಯೂ ಅಸ್ಥಿರತೆ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಆದರೆ, ರಿಸರ್ವ್ ಬ್ಯಾಂಕ್‌ನಿಂದ ಅನುಮತಿ ಪಡೆದು ವ್ಯವಹಾರ ನಡೆಸುತ್ತಿರುವವರಿಗೆ ಈ ಕಾಯ್ದೆ ಅನ್ವಯವಾಗುವುದಿಲ್ಲ. ಈ ಯೋಜನೆ ಬಗ್ಗೆ ಕೇಂದ್ರ ಸರಕಾರವೂ ಮಾಹಿತಿ ಕೇಳಿತ್ತು. ಕೇಂದ್ರದ ಎಲ್ಲ ಗೊಂದಲಗಳನ್ನು ನಮ್ಮ ಅಧಿಕಾರಿಗಳು ಮಾಹಿತಿ ನೀಡಿ ನಿವಾರಿಸಿದ್ದಾರೆ. ಫೆಬ್ರವರಿಯಲ್ಲಿ ವಿಧಾನಸಭೆಯಲ್ಲಿ ಈ ಮಸೂದೆಗೆ ಅಂಗೀಕಾರ ಸಿಕ್ಕಿತ್ತು. ಇದೀಗ ಮಸೂದೆಗೆ ರಾಷ್ಟ್ರಪತಿ ಜು.16ರಂದು ಅಂಕಿತ ಹಾಕಿದ್ದಾರೆ ಎಂದು ಅವರು ತಿಳಿಸಿದರು.

ರೈತರ ಸಾಲಮನ್ನಾ, ರೈತರ ಅಭಿವೃದ್ಧಿ, ಕೈಗಾರಿಕೆಗಳ ಅಭಿವೃದ್ಧಿಗೆ ರಾಜಕೀಯ ಜಂಜಾಟಗಳ ನಡುವೆಯೂ ಸಹಕಾರ ನೀಡಿದ ಅಧಿಕಾರಿಗಳಿಗೆ ಧನ್ಯವಾದ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟು ಮಾಡಲು ಕಳೆದ 14 ತಿಂಗಳು ನಡೆದ ಪ್ರಯತ್ನ ನಡುವೆಯೂ ರಾಜ್ಯದ ಆರ್ಥಿಕ ಸ್ಥಿತಿ ಕಾಪಾಡಲು ಸಹಕರಿಸಿದ ಅಧಿಕಾರಿಗಳಿಗೆ ವಂದನೆಗಳು ಕುಮಾರಸ್ವಾಮಿ ಹೇಳಿದರು.

ರಾಷ್ಟ್ರಪತಿಗೆ ಕೃತಜ್ಞತೆ

ಕಳೆದ ಸಾಲಿನ ದೀಪಾವಳಿಯಲ್ಲಿ ನಾಡಿನ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವಾಗ ಬಡವರಿಗೆ ಕೊಡುಗೆ ನೀಡಿದ್ದೇನೆ. ನಾನು ಇವತ್ತು ನಮ್ಮ ಕಚೇರಿಯಿಂದ ನಿರ್ಗಮಿಸುತ್ತಿದ್ದೇನೆ. ನಿರ್ಗಮಿಸುವ ಮುನ್ನ ನಾಡಿನ ಬಡ ಜನರ ಪರವಾಗಿ ರಾಷ್ಟ್ರಪತಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.

-ಎಚ್.ಡಿ.ಕುಮಾರಸ್ವಾಮಿ, ಹಂಗಾಮಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News