ರಾಮಲಿಂಗಾರೆಡ್ಡಿಯನ್ನು ಭೇಟಿಯಾದ ಕುಮಾರಸ್ವಾಮಿ

Update: 2019-07-25 15:10 GMT

ಬೆಂಗಳೂರು, ಜು. 25: ಬಿಜೆಪಿ ವಲಯದಲ್ಲಿ ನೂತನ ಸರಕಾರ ರಚನೆಗೆ ಕಸರತ್ತು ನಡೆದಿರುವ ಬೆನ್ನಲ್ಲೆ ದಿಢೀರ್ ಬೆಳವಣಿಗೆಯಲ್ಲಿ ಹಂಗಾಮಿ ಸಿಎಂ ಕುಮಾರಸ್ವಾಮಿ ಹಾಗೂ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ.

ಗುರುವಾರ ಇಲ್ಲಿನ ಲಕ್ಕಸಂದ್ರದಲ್ಲಿರುವ ರಾಮಲಿಂಗಾರೆಡ್ಡಿ ಅವರ ನಿವಾಸಕ್ಕೆ ಖುದ್ದು ಹಂಗಾಮಿ ಸಿಎಂ ಕುಮಾರಸ್ವಾಮಿ ತೆರಳಿದ್ದು ಉಪಾಹಾರ ಸೇವಿಸಿ, ರಾಮಲಿಂಗಾರೆಡ್ಡಿ ಹಾಗೂ ಅವರ ಪುತ್ರಿ ಶಾಸಕಿ ಸೌಮ್ಯಾರೆಡ್ಡಿ ಜತೆ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿ ಸಂಚಲನ ಮೂಡಿಸಿದೆ.

‘ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು’ ಎಂದು ಹಂಗಾಮಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಮಧ್ಯೆಯೆ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರ ನಿವಾಸಕ್ಕೆ ತೆರಳಿರುವುದು ತೀವ್ರ ಅಚ್ಚರಿಗೆ ಕಾರಣವಾಗಿದೆ.

ಅಭಿನಂದನೆ ಸಲ್ಲಿಸಲು ಬಂದಿದ್ದೆ: ಮೈತ್ರಿ ಸರಕಾರ ಬೆಂಬಲಿಸಲು ರೆಡ್ಡಿ ಅವರಿಗೆ ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ನಾನು ಮನವಿ ಮಾಡಿದ್ದೆ. ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ರೀತಿ ವರ್ತಿಸಿದರು. ಹೀಗಾಗಿ ಅವರನ್ನು ಅಭಿನಂದಿಸಲು ಆಗಮಿಸಿದ್ದೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ವಿಧಾನಸಭೆಯಲ್ಲೆ ಈ ವಿಚಾರ ಪ್ರಸ್ತಾಪಿಸಲು ಸಾಧ್ಯವಾಗಿರಲಿಲ್ಲ. ಆದುದರಿಂದ ಅವರನ್ನು ಭೇಟಿ ಮಾಡಿದ್ದು, ರಾಮಲಿಂಗಾರೆಡ್ಡಿ ಮತ್ತು ಅವರ ಪುತ್ರಿ ಶಾಸಕಿ ಸೌಮ್ಯಾ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಅದನ್ನು ಬಿಟ್ಟರೆ ಬೇರೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ರಾಜಕೀಯವೇನೂ ಇಲ್ಲ: ರಾಜೀನಾಮೆ ಹಿನ್ನೆಲೆಯಲ್ಲಿ ಅದನ್ನು ಹಿಂಪಡೆಯಲು ದೇವೇಗೌಡ ಹಾಗೂ ಕಾಂಗ್ರೆಸ್ ಮುಖಂಡರು ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಲು ಹಂಗಾಮಿ ಸಿಎಂ ನನ್ನ ನಿವಾಸಕ್ಕೆ ಬಂದಿದ್ದರು ಎಂದು ಸ್ಪಷ್ಟಪಡಿಸಿದ ರೆಡ್ಡಿ, ಯಾವುದೇ ರಾಜಕೀಯದ ಬಗ್ಗೆ ಮಾತನಾಡಿಲ್ಲ ಎಂದರು.

ರಾಜೀನಾಮೆ ನೀಡಿರುವ ಶಾಸಕರ ಪೈಕಿ ನನಗೆ ಸಂಬಂಧ ಇರುವುದು ಬೆಂಗಳೂರಿನ ಮೂರು ಮಂದಿ. ಅವರಿಗೆ ಮೊಬೈಲ್ ಕರೆ ಮಾಡಲು ಪ್ರಯತ್ನಿಸಿದ್ದು, ಅವರು ಕರೆಯನ್ನು ಸ್ವೀಕರಿಸಿಲ್ಲ. ಎಚ್‌ಡಿಕೆ ರಾಜಕೀಯ ಅಸ್ಥಿರತೆ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.

ಮಧ್ಯಂತರ ಚುನಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಇದೇನು ಬಿಬಿಎಂಪಿ ಚುನಾವಣೆ ಅಲ್ಲ. ಮೈತ್ರಿ ಮುಂದುವರಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅದನ್ನು ಪಕ್ಷದ ಅಧ್ಯಕ್ಷರು ಹಾಗೂ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆಂದು ರಾಮಲಿಂಗಾರೆಡ್ಡಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News