×
Ad

​ಮಂತ್ರಿ ಸ್ಥಾನ ಸಿಗದಿದ್ದಲ್ಲಿ ಯಡಿಯೂರಪ್ಪರನ್ನು ನಮ್ಮ ಅತೃಪ್ತ ಶಾಸಕರು ಹರಿದು ತಿನ್ನುತ್ತಾರೆ: ಡಿಕೆಶಿ

Update: 2019-07-25 14:08 IST

ಬೆಂಗಳೂರು, ಜು. 25: ಯಡಿಯೂರಪ್ಪಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮುಂಬೈಯಲ್ಲಿ ಕೂತಿರುವ ಸಂತೃಪ್ತರಿಗೆ ಸಚಿವ ಸ್ಥಾನ ನೀಡದಿದ್ದರೆ ಯಡಿಯೂರಪ್ಪನವರನ್ನು ಹರಿದು ನುಂಗಿಬಿಡುತ್ತಾರೆಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಎಚ್ಚರಿಸಿದ್ದಾರೆ.

ಗುರುವಾರ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಸಂತೃಪ್ತರಿಗೆ ಸಚಿವ ಸ್ಥಾನ ಸಿಗದಿದ್ದರೆ ಬಿಎಸ್‌ವೈ ಅವರ ಕಥೆ ಗೋವಿಂದ ಎಂದು ಲೇವಡಿ ಮಾಡಿದರು.

30-40 ವರ್ಷಗಳ ಕಾಲ ಸಾಕಿ ಸಲಹಿ ಇಷ್ಟು ದೊಡ್ಡಮಟ್ಟಕ್ಕೆ ಬೆಳೆಸಿದ ನಮ್ಮನ್ನು, ಕಾರ್ಯಕರ್ತರನ್ನೆ ಸಂತೃಪ್ತರು ಬಿಡಲಿಲ್ಲ. ಇನ್ನು ಬಿಜೆಪಿ ಸರಕಾರದಲ್ಲಿ ಅವರಿಗೆ ಸಚಿವ ಸ್ಥಾನ ಸಿಗದಿದ್ದರೆ ಬಿಡುವರೇ? ಯಡಿಯೂರಪ್ಪರನ್ನು ಹರಿದು ನುಂಗ್ತಾರೆ ಎಂದು ಎಚ್ಚರಿಕೆ ನೀಡಿದರು.

ಬಿಎಸ್‌ವೈ ಪ್ರಮಾಣ ವಚನ ಸ್ವೀಕಾರ ಮಾಡಬೇಕಾದರೆ ರಾಜೀನಾಮೆ ನೀಡಿದ 15 ಜನರಲ್ಲಿ ಮಹೇಶ್ ಕುಮಟಳ್ಳಿ ಮಾತ್ರ ಸಚಿವ ಸ್ಥಾನ ಬಿಡಬಹುದು. ಮಿಕ್ಕ ಎಲ್ಲರೂ ಸಚಿವ ಸ್ಥಾನಕ್ಕೆ ಪಟ್ಟು ಹಿಡಿಯುತ್ತಾರೆ. ಒಂದು ವೇಳೆ ಅವರಿಗೆ ಸಿಗದಿದ್ದರೆ ಬಿಎಸ್‌ವೈ ಪ್ಯಾಂಟು, ಶರ್ಟು ಹರಿದುಹಾಕಲಿದ್ದಾರೆ. ಒಬ್ಬ ಜೇಬು, ಮತ್ತೊಬ್ಬ ಪ್ಯಾಂಟು, ಇನ್ನೊಬ್ಬ ಶರ್ಟು ಕಿತ್ತುಕೊಳ್ಳಲಿದ್ದಾರೆ. ಅಷ್ಟೆ ಅಲ್ಲ ಅವರ ಸುತ್ತಮುತ್ತ ಇರುವ ಮುತ್ತು-ರತ್ನಗಳನ್ನೆಲ್ಲಾ ಕಿತ್ತು ಹಾಕ್ತಾರೆ ಎಂದು ಟೀಕಿಸಿದರು.

ಬಿಎಸ್‌ವೈಗೆ ಇನ್ನು ಗೊತ್ತಿಲ್ಲ. ಅಲ್ಲಿರುವವರ ಪೈಕಿ ಒಬ್ಬನಿಗೆ ಬೆಂಗಳೂರು ನಗರಾಭಿವೃದ್ಧಿ ಸ್ಥಾನ, ಮತ್ತೊಬ್ಬನಿಗೆ ಇಂಧನ, ಮಗದೊಬ್ಬನಿಗೆ ಲೋಕೋಪಯೋಗಿ ಸಚಿವ ಸ್ಥಾನ ಹಂಚಿಕೊಂಡು ಕೂತಿದ್ದಾರೆ. ನನ್ನ ಬಳಿ ಅವರೇ ಹೇಳಿದ್ದಾರೆ. ಮುಂದಿನ ಅಧಿವೇಶನದಲ್ಲಿ ಎಲ್ಲವನ್ನು ಬಹಿರಂಗಪಡಿಸುವೆ ಎಂದರು.

ಇವರನ್ನು ಬಿಜೆಪಿ ಹೈಕಮಾಂಡ್ ನಿಯಂತ್ರಣ ಮಾಡುತ್ತದೆಯೋ ಇಲ್ಲವೋ ತಿಳಿಯದು. ಆದರೆ, ರಾಜೀನಾಮೆ ನೀಡಿರುವ ಸ್ನೇಹಿತರ ಸ್ಥಿತಿ ಏನಾಗಲಿದೆ ಎಂಬುದು ಗೊತ್ತು. ಬಿಎಸ್‌ವೈ ತಮ್ಮ ಜತೆ ಇವರನ್ನು ಪ್ರಮಾಣ ವಚನ ಸ್ವೀಕರಿಸಿದರೆ ಒಳ್ಳೆಯದು. ಇಲ್ಲವಾದರೆ ಅವರ ಕಥೆ ದೇವರೆ ಕಾಪಾಡಬೇಕು ಎಂದು ಲೇವಡಿ ಮಾಡಿದರು.

ಸ್ಪೀಕರ್‌ಗೆ ಬಿಟ್ಟದ್ದು: ನೂತನ ಸರಕಾರ ರಚನೆಗೆ ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿಸುತ್ತದೆಯೋ ಇಲ್ಲವೋ ಗೊತ್ತಿಲ್ಲ. ಇದರಿಂದ ನಮಗೆ ಲಾಭ-ನಷ್ಟದ ಲೆಕ್ಕಾಚಾರವೇನಿಲ್ಲ. ಯಾವುದೇ ಸರಕಾರ ರಚನೆಗೆ 113 ಬಹುಮತ ಅಗತ್ಯ. ಶಾಸಕರ ರಾಜೀನಾಮೆ ಅಂಗೀಕಾರ ಸ್ಪೀಕರ್ ತೀರ್ಮಾನಕ್ಕೆ ಬಿಟ್ಟದ್ದು ಎಂದು ಹೇಳಿದರು.

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಮೈತ್ರಿ ರಚನೆಗೆ ಸೂಚನೆ ನೀಡಿದ್ದು ರಾಹುಲ್ ಗಾಂಧಿ. ಹೈಕಮಾಂಡ್ ಸೂಚನೆಯಂತೆ ಕೆಲಸ ಮಾಡುತ್ತೇನೆ. 14 ತಿಂಗಳು ಮೈತ್ರಿ ಸರಕಾರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಇದೀಗ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂದು ಪ್ರಕಟಿಸಿದರು.

ಯಾವುದೇ ಸ್ಥಾನಮಾನ ಬೇಡ:
‘ನನಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಬೇಡ, ಅದರ ಅವಶ್ಯಕತೆನೂ ಇಲ್ಲ. ಈಗಿರುವ ಸ್ಥಾನವನ್ನು ಕ್ಷೇತ್ರದ ಜನತೆ ಕೊಟ್ಟಿದ್ದು, ನನಗೆ ಅಷ್ಟೇ ಸಾಕು. ಪಕ್ಷ ಮಂತ್ರಿ ಸ್ಥಾನ ನೀಡಿತ್ತು, ಈಗ ಇಲ್ಲ. ನಾನು ಸಮಾಧಾನವಾಗಿಯೇ ಇದ್ದೇನೆ. ಯಾವುದೇ ಅಧಿಕಾರವಿಲ್ಲದಿದ್ದರೂ ಹೇಗೆ ಜನ ಬಂದು ನಿಂತಿದ್ದಾರೆ, ಇದೇ ಸಾಕು’
-ಡಿ.ಕೆ.ಶಿವಕುಮಾರ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News