ಈ ತಂದೆ- ಮಗನಿಗೆ ಕಾರ್ಗಿಲ್ ಯುದ್ಧದ ನೆನಪು ವಿಶೇಷ..

Update: 2019-07-26 04:36 GMT
ಚಿತ್ರ: Times of India

ಲಮೋಚನ್ (ದ್ರಾಸ್), ಜು.26: ಲೆಫ್ಟಿನೆಂಟ್ ಜನರಲ್ ಎ.ಎನ್.ಔಲ್ ಬಹುಶಃ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಮಗನ ಜತೆಗೆ ಹೋರಾಡಿದ ಏಕೈಕ ಕಮಾಂಡರ್. ಕರ್ನಲ್ ಅಮಿತ್ ಔಲ್ ಜತೆಗೆ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ಮಧುರ ನೆನಪುಗಳನ್ನು ಮೆಲುಕು ಹಾಕಿಕೊಳ್ಳುವ ಸಲುವಾಗಿ ಮತ್ತು ಯುದ್ಧದಲ್ಲಿ ಮಡಿದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಗುರುವಾರ ತಂದೆ- ಮಗ ದ್ರಾಸ್‌ಗೆ ಆಗಮಿಸಿದ್ದರು.

ಲೆಫ್ಟಿನೆಂಟ್ ಜನರಲ್ ಔಲ್, 1999ರ ಸಂಘರ್ಷದ ಸಂದರ್ಭದಲ್ಲಿ ದ್ರಾಸ್ ಉಪವಲಯದ ಆಯಕಟ್ಟಿನ ಪ್ರದೇಶ ಎನಿಸಿದ ಟೈಗರ್ ಹಿಲ್ ವಶಪಡಿಸಿಕೊಂಡ 56ನೇ ಮೌಂಟೆನ್ ಬ್ರಿಗೇಡ್‌ನ ಕಮಾಂಡರ್ ಆಗಿದ್ದವರು. ಆ ಯುದ್ಧದ ಕ್ಷಣಗಳನ್ನು ಲಮೋಚನ್‌ಗೆ ಬಂದು ಮತ್ತೆ ಇಬ್ಬರೂ ನೆನಪಿಗೆ ತಂದುಕೊಂಡರು. ಲೆಫ್ಟಿನೆಂಟ್ ಜನರಲ್ ಔಲ್, ಪಶ್ಚಿಮ ಕಮಾಂಡ್‌ನ ಸಿಬ್ಬಂದಿ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ.

ಆಗ ಬ್ರಿಗೇಡಿಯರ್ ಆಗಿದ್ದ ಲೆಫ್ಟಿನೆಂಟ್ ಜನರಲ್ ಔಲ್, ಟೊಲೊಲಿಂಗ್ ಮತ್ತು ಟೈಗರ್ ಹಿಲ್ ವಶಪಡಿಸಿಕೊಂಡ 56ನೇ ಮೌಂಟೆನ್ ಬ್ರಿಗೇಡ್‌ನ ನೇತೃತ್ವ ವಹಿಸಿದ್ದರು. 3/3 ಗೂರ್ಖಾ ರೈಫಲ್ಸ್‌ನಲ್ಲಿ ಆಗ ಸೆಕೆಂಡ್ ಲೆಫ್ಟಿನೆಂಟ್ ಆಗಿದ್ದ ಅಮಿತ್ ಮಾರ್ಪೊಲಾ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಪಂಚಕುಲದಲ್ಲಿ ವಾಸಿಸುವ ಈ ತಂದೆ- ಮಗನ ಸಾಹಸಕ್ಕೆ ಪುರಸ್ಕಾರವೂ ಲಭಿಸಿದೆ. ಜನರಲ್ ಔಲ್ ಅವರಿಗೆ ಉತ್ತಮ ಯೋಧ ಸೇವಾ ಪದಕ ಹಾಗೂ ಅಮಿತ್‌ಗೆ ಸೇನಾ ಶೌರ್ಯ ಪದಕದ ಗೌರವ ಸಂದಿದೆ.

"ನೀನು ಯುದ್ಧದಲ್ಲಿ ಹೋರಾಡುವ ಸೈನಿಕ. ತಾಯಿಗೆ ಎಲ್ಲವನ್ನೂ ಹೇಳಬೇಡ ಎಂದು ತಂದೆ ನನಗೆ ಸಲಹೆ ಮಾಡಿದ್ದರು" ಎಂದು ಅಮಿತ್ ನೆನಪಿಸಿಕೊಂಡರು. ಯುದ್ಧ ಸಂದರ್ಭದಲ್ಲಿ ತಂದೆ ಜತೆಗೆ ಅಮಿತ್ ಮಾತನಾಡಿರಲಿಲ್ಲ. ಯುದ್ಧ ಮುಗಿದು ಎರಡು ತಿಂಗಳ ಬಳಿಕ ತಂದೆ- ಮಗನ ಸಮಾಗಮವಾಗಿತ್ತು.

"ನನ್ನ ಘಟಕಕ್ಕೆ ಕೊನೆಯ ಪತ್ರವನ್ನೂ ಬರೆದಿದ್ದೆ" ಎಂದು ಅಮಿತ್ ಜ್ಞಾಪಿಸಿಕೊಳ್ಳುತ್ತಾರೆ. ಸೈನಿಕರು ಯುದ್ಧ ಕ್ಷೇತ್ರದಲ್ಲಿ ಮಡಿದಾಗ ಆ ಪತ್ರವನ್ನು ಕುಟುಂಬಗಳಿಗೆ ಕಳುಹಿಸಲಾಗುತ್ತದೆ.

ಇದ್ದ ಒಬ್ಬನೇ ಮಗ ಯುದ್ಧದಲ್ಲಿ ಹೋರಾಡುವ ಸಂದರ್ಭದಲ್ಲಾದ ಆತಂಕದ ಬಗ್ಗೆ ಪ್ರಶ್ನಿಸಿದಾಗ, "ಅಂಥ ಆತಂಕಕ್ಕೆ ಕಾರಣವೇ ಇಲ್ಲ. ಆತ ಸೈನಿಕ; ಆದೇಶ ಪಾಲಿಸುತ್ತಾನೆ. ಅದನ್ನು ಸೈನಿಕ ಮಾಡಲೇಬೇಕು. ಆತ ಕೆಚ್ಚಿನಿಂದ ಹೋರಾಡಿದ ಬಗ್ಗೆ ನನಗೆ ಹೆಮ್ಮೆ ಇದೆ. ಅದಕ್ಕಾಗಿ ಆತನಿಗೆ ಗೌರವವೂ ಸಿಕ್ಕಿದೆ" ಎಂದು ಜನರಲ್ ಔಲ್ ಬಿಚ್ಚುಮನಸ್ಸಿನಿಂದ ಮಾತನಾಡಿದರು.

ಜನರಲ್ ಔಲ್ ಅವರ ಪತ್ನಿ ಬೀನಾ ಕೌಲ್ ಮಾತನಾಡಿ, ಆ ಎರಡೂವರೆ ತಿಂಗಳ ಯುದ್ಧದ ಅವಧಿಯಲ್ಲಿ ಎಲ್ಲ ಪ್ರಾರ್ಥನೆಯನ್ನೂ ಮಾಡಿದ್ದೆ ಎಂದು ನೆನಪಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News