ಕನ್ನಡಿಗರ ಹೆಮ್ಮೆಯಾಗಿ ಕಾರ್ನಾಡ್ ಗುರುತಿಸಿಕೊಳ್ಳಲು ಅನುವಾದ ಕಾರಣ: ಲೇಖಕಿ ವನಮಾಲ ವಿಶ್ವನಾಥ್

Update: 2019-07-26 16:30 GMT

ಬೆಂಗಳೂರು, ಜು.26: ರಾಷ್ಟ್ರ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಹೆಮ್ಮೆಯಾಗಿ ಗಿರೀಶ್ ಕಾರ್ನಾಡ್ ಗುರುತಿಸಿಕೊಳ್ಳಲು ಅನುವಾದಗಳಿಂದಲೇ ಸಾಧ್ಯವಾಯಿತು ಎಂದು ಲೇಖಕಿ ಹಾಗೂ ಅನುವಾದಕಿ ವನಮಾಲ ವಿಶ್ವನಾಥ್ ಅಭಿಪ್ರಾಯಪಟ್ಟರು.

ಶುಕ್ರವಾರ ನಗರದಲ್ಲಿಂದು ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ‘ಅನುವಾದಕರಾಗಿ ಗಿರೀಶ್ ಕಾರ್ನಾಡ್’ ವಿಚಾರ ಕುರಿತ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡದ, ಭಾರತದ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಐಕಾನ್ ಆಗಿ ಗುರುತಿಸಿಕೊಳ್ಳಲು ಅವರ ನಾಟಕಗಳ ಅನುವಾದಗಳೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

ಗಿರೀಶ್ ಕಾರ್ನಾಡ್‌ರ ನಾಟಕಗಳ ಮೂಲಕ ಅನುವಾದಕ್ಕೆ ಮಹತ್ತರವಾದ ಕೊಡುಗೆ ನೀಡಿದ್ದಾರೆ. ಅದೇ ರೀತಿ ಅನುವಾದವೂ ಅವರ ಬದುಕಿಗೆ ಅಪಾರವಾದ ಕೊಡುಗೆ ನೀಡಿದೆ ಎಂದ ಅವರು, ಕಾರ್ನಾಡ್ ಅವರ ಎಲ್ಲ ನಾಟಕಗಳನ್ನು ಸ್ವತಃ ಅವರೇ ಅನುವಾದಿಸಿದ್ದಾರೆ. ಬರಹಗಾರರು ಹಾಗೂ ಅನುವಾದಕರ ನಡುವೆ ಮೇಲು-ಕೀಳು ಎಂಬ ಪೂರ್ವಗ್ರಹಗಳಿವೆ. ಹೀಗಾಗಿ, ಅವರೇ ಎಲ್ಲ ಅನುವಾದ ಮಾಡಿರುವುದು ವಿಶೇಷವಾಗಿದೆ ಎಂದರು.

ಕಾರ್ನಾಡ್ ರಂಗಭೂಮಿ, ರಂಗಕ್ರಿಯೆ ಎಲ್ಲವನ್ನೂ ಅರೆದು ಕುಡಿದಿದ್ದಾರೆ. ಅವರ ಅನುವಾದದ ಸಂದರ್ಭದಲ್ಲಿ ಸಾಹಿತ್ಯದ ಕೃತಿಯಾಗಿ ಅಲ್ಲದೆ, ರಂಗದ ಮೇಲೆ ಹೇಗೆ ಪ್ರದರ್ಶಿಸಲು ಸಾಧ್ಯವಾಗುತ್ತದೆ ಎಂಬುದನ್ನು ಅರಿತು ಅನುವಾದ ಮಾಡಿದ್ದಾರೆ. ಇಂಗ್ಲೆಂಡ್‌ಗೆ ಹೋಗಿ ಅಂತರ್‌ರಾಷ್ಟ್ರೀಯ ಮಟ್ಟದ ಕವಿಯಾಗಬೇಕು ಎಂದುಕೊಂಡಿದ್ದರು. ಆದರೆ, ಅವರ ಯಯಾತಿ ನಾಟಕವು ಅವರ ಆಲೋಚನೆಯನ್ನು ಬದಲಿಸಿತು. ಈ ನಾಟಕ ನಾನು ಕನ್ನಡಕ್ಕೆ ಬದ್ಧ ಎಂಬ ಪಾಠ ಕಲಿಸಿತು ಎಂದು ನುಡಿದರು.

ಗಿರೀಶ್ ಕಾರ್ನಾಡ್ ನಾಟಕಗಳನ್ನು ಕನ್ನಡದಲ್ಲಿ ಪ್ರಕಟವಾದ ಬಳಿಕ, ಅದಕ್ಕೆ ಬರುತ್ತಿದ್ದ ಪ್ರತಿಕ್ರಿಯೆಗಳನ್ನು ಗಮನದಲ್ಲಿಟ್ಟುಕೊಂಡು ಅನುವಾದ ಮಾಡುತ್ತಿದ್ದರು. ಪ್ರದರ್ಶನದ ಬಳಿಕ ಯಾವುದನ್ನು ತಿದ್ದಬೇಕು, ಸೇರಿಸಬೇಕು, ಬಿಡಬೇಕು ಎಂಬ ಸೂಕ್ಷ್ಮತೆಗಳನ್ನು ಗಮನಿಸುತ್ತಿದ್ದರು. ಕಾರ್ನಾಡ್‌ರ ಅನುವಾದಗಳು ಅನುವಾದ ಕೃತಿಗಳನ್ನು ಯಾವ ರೀತಿ ಗ್ರಹಿಸಬೇಕು ಎಂಬ ಸೂಕ್ಷ್ಮತೆಯನ್ನು ಕಲಿಸಿಕೊಟ್ಟಿವೆ ಎಂದು ಅವರು ಹೇಳಿದರು.

ಕಾರ್ನಾಡ್ ಅವರು ಚರಿತ್ರೆ, ಪುರಾಣ ಹಾಗೂ ಜಾನಪದದಿಂದ ತನಗೆ ಬೇಕಾದ ಕಥೆಗಳನ್ನು ಆರಿಸಿಕೊಂಡು, ತಮ್ಮದೇ ಆದ ಶೈಲಿಯಲ್ಲಿ ವಸ್ತುವಿಗೆ ನವ್ಯತೆಯ ಸೊಗಡು ಹಚ್ಚಿ ನಾಟಕಗಳನ್ನು ಬರೆದಿದ್ದಾರೆ. ಆ ಮೂಲಕ ಇಂದಿನ ಸಮಸ್ಯೆಗಳು, ಸನ್ನಿವೇಶಗಳು ಹಾಗೂ ಸವಾಲುಗಳನ್ನು ತೋರಿಸಿಕೊಟ್ಟಿದ್ದಾರೆ. ಅವರ ಅನುವಾದಗಳು ಗಡಿರೇಖೆ ದಾಟಿ, ಹೊರಗಿನ ಪ್ರಪಂಚಕ್ಕೆ ತಲುಪುವ, ವಿಶಾಲಾತ್ಮಕವಾದ ವಿಷಯಗಳನ್ನು ಮುಖ್ಯ ಮಾಡುವುದನ್ನು ತೋರಿಸಿವೆ ಎಂದು ತಿಳಿಸಿದರು.

ಕನ್ನಡದಲ್ಲಿ ಡಾ.ಚಂದ್ರಶೇಖರ ಕಂಬಾರ, ಲಂಕೇಶ್, ಚಂಪಾ ಸೇರಿದಂತೆ ಅನೇಕರಿದ್ದಾರೆ. ಆದರೆ, ಕಾರ್ನಾಡ್ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು. ಲಂಕೇಶರು ಕರ್ನಾಟಕದ ಗಡಿಯನ್ನು ದಾಟಿ ಮುಂದಕ್ಕೆ ಹೋಗಲು ಇಚ್ಛಿಸಿದವರಲ್ಲ ಎಂದ ಅವರು, ಕಾರ್ನಾಡ್‌ರ ಅನುವಾದಗಳು ಹತ್ತಾರು ಸಂಸ್ಕೃತಿಗಳೊಂದಿಗೆ ಸಮ್ಮಿಲನವಾದವು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾಷಾಂತರ ಕೇಂದ್ರದ ಗೌರವ ನಿರ್ದೇಶಕ ಎಸ್.ಆರ್.ವಿಜಯಶಂಕರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News