ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವಲ್ಲಿ ಮಹಿಳೆಯ ಪಾತ್ರ ಮಹತ್ವದ್ದು: ಚಂದ್ರಶೇಖರ ಕಂಬಾರ

Update: 2019-07-26 16:59 GMT

ಬೆಂಗಳೂರು, ಜು.26: ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ ಹೀಗೆ ವಿವಿಧ ಪಾತ್ರಗಳನ್ನು ನಿರ್ವಹಿಸುವ ಮೂಲಕ ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವಲ್ಲಿ ಮಹಿಳೆಯ ಪಾತ್ರ ಮಹತ್ವದಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ಟಿ.ಸುನಂದಮ್ಮ ಸ್ಮಾರಕ ಪ್ರತಿಷ್ಠಾನ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ.ವೈದೇಹಿ ಅವರಿಗೆ ಡಾ.ಸುನಂದಮ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ತಾಯಿ ತನ್ನ ಮಗುವಿಗೆ ಕತೆಗಳನ್ನು ಹೇಳುತ್ತಾ ಸೃಜನಶೀಲತೆ ಮೊಳಕೆ ಒಡೆಯುವಂತೆ ಮಾಡುತ್ತಾಳೆ. ನಂತರ ಆ ಮಗು ಅಮ್ಮ ಹೇಳಿಕ ಕತೆಯನ್ನು ತನ್ನದೇ ಭಾಷೆ, ಶೈಲಿಯಲ್ಲಿ ಇತರರ ಬಳಿ ಕತೆಯನ್ನು ವಿಸ್ತರಿಸುತ್ತಾ ಸಾಗುತ್ತದೆ. ಇದು ತಾಯಿಯಿಂದ ಸಾಧ್ಯವೆ ಹೊರತು ಅಪ್ಪನಿಂದ ಸಾಧ್ಯವಿಲ್ಲ. ಹೀಗಾಗಿ ನಮ್ಮ ಸಮಾಜದಲ್ಲಿ ಮಹಿಳಾ ಚಿಂತನೆಗೆ ತನ್ನದೆ ಆದ ಅಸ್ಮಿತೆಯಿದೆ ಎಂದು ಅವರು ಬಣ್ಣಿಸಿದರು.

ಮಹಿಳಾ ಸಾಹಿತ್ಯವನ್ನು ಇತರೆ ಸಾಹಿತ್ಯದೊಂದಿಗೆ ಹೋಲಿಸಿ ವಿಶ್ಲೇಷಿಸಲು ಸಾಧ್ಯವಿಲ್ಲ. ಮಹಿಳಾ ಬರಹಗಾರರಿಗೆ ತಮ್ಮದೇ ಆದ ವಿಶಿಷ್ಟ, ವಿಭಿನ್ನತೆ ಇದೆ. ಅದು ತನ್ನದೆ ಆದ ಸ್ವಾತಂತ್ರದ ಹಾದಿಯಲ್ಲಿ ಸಾಗುತ್ತಿರುತ್ತದೆ. ವಚನಕಾರರಲ್ಲಿ ಅಕ್ಕ ಮಹಾದೇವಿಯ ಚಿಂತನೆ, ಬರಹಗಳು ಹೇಗೆ ವಿಭಿನ್ನವೋ ಹಾಗೆಯೆ ಆಧುನಿಕ ಮಹಿಳಾ ಬರಹಗಾರರು ವಿಭಿನ್ನರಾಗಿಯೆ ತಮ್ಮ ದಾರಿಯಲ್ಲಿ ಹೋಗುತ್ತಿದ್ದಾರೆ ಎಂದು ಅವರು ಹೇಳಿದರು.

ಹಾಸ್ಯ ಲೇಖಕಿ ಭವನೇಶ್ವರಿ ಹೆಗಡೆ ಮಾತನಾಡಿ, ಇವತ್ತು ಹಾಸ್ಯವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ. ಹಾಸ್ಯ ಅಲ್ಲದಿರುವುದನ್ನು ಹಾಸ್ಯವೆಂದು ಹೇಳಿ ಹಾಸ್ಯಕ್ಕಿರುವ ವಿಸ್ತಾರತೆಯನ್ನು ಸಂಕುಚಿತ ಮಾಡಲಾಗುತ್ತಿದೆ. ಹೀಗಾಗಿ ಹಾಸ್ಯದ ಕುರಿತು ವಿಮರ್ಶೆ ಹಾಗೂ ಚರ್ಚೆಗಳಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ, ಹಿರಿಯ ಪತ್ರಕರ್ತೆ ಪೂರ್ಣಿಮಾ, ಟಿ.ಸುನಂದಮ್ಮಾ ಸಂಬಂಧಿ ನರಸಿಂಹಮೂರ್ತಿ ಮತ್ತಿತರರಿದ್ದರು.

ಮಹಿಳೆ ಸಾರ್ವಜನಿಕವಾಗಿ ನಗಬಾರದು ಎಂಬ ಸಂಪ್ರದಾಯಸ್ಥ ಕಾಲಘಟ್ಟದಲ್ಲಿ ಹಾಸ್ಯ ಲೇಖಕಿ ಟಿ.ಸುನಂದಮ್ಮ ತಮ್ಮ ಲೇಖನಗಳ ಮೂಲಕ ಇಡೀ ಸಮಾಜಕ್ಕೆ ನಗೆ ಹನಿಗಳನ್ನು ಉಣ ಬಡಿಸಿದ್ದಾರೆ. ಕೊರವಂಜಿ ಪತ್ರಿಕೆಯಲ್ಲಿ ಸುನಂದಮ್ಮ ಬರೆಯುತ್ತಿದ್ದ ಹಾಸ್ಯ ಲೇಖನಗಳು ಜನಪ್ರಿಯವಾಗಿದ್ದವು.

-ಭುವನೇಶ್ವರಿ ಹೆಗಡೆ, ಹಾಸ್ಯ ಲೇಖಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News