ಮೌಲ್ಯಮಾಪಕರಿಗೆ ಜವಾಬ್ದಾರಿ ಇರಲಿ

Update: 2019-07-26 18:13 GMT

ಮಾನ್ಯರೇ,

ವಿದ್ಯಾಭ್ಯಾಸದ ಪ್ರಮುಖ ಹಂತ ಎಸೆಸೆಲ್ಸಿಯಲ್ಲಿ ಅಚ್ಚರಿಯೆಂಬಂತೆ ಪ್ರತಿಭಾನ್ವಿತ ವಿದ್ಯಾರ್ಥಿಗಳು ಅನುತ್ತೀರ್ಣರಾದ ಘಟನೆಗಳು ರಾಜ್ಯದಲ್ಲಿ ನಡೆದಿತ್ತು. ಈ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೊನೆಗೂ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಚ್ಚೆತ್ತುಕೊಂಡು ‘ಲೋಪ’ದ ಮೂಲವನ್ನು ಪತ್ತೆಹಚ್ಚಿದೆ. ಈಗ ಈ ವರ್ಷದ ಎಸೆಸೆಲ್ಸಿ ಪರೀಕ್ಷೆಯ ಉತ್ತರಪತ್ರಿಕೆ ಮೌಲ್ಯಮಾಪನದ ವೇಳೆ ಬೇಜವಾಬ್ದಾರಿಯಿಂದ ಮೌಲ್ಯಮಾಪನ ಮಾಡಿದ ನೂರಕ್ಕೂ ಹೆಚ್ಚು ಮೌಲ್ಯಮಾಪಕರಿಗೆ ಇಂತಿಷ್ಟು ಸಾವಿರ ದಂಡ ಪಾವತಿಸುವಂತೆ ಆದೇಶಿಸಿರುವುದು ಸೂಕ್ತ ನಿರ್ಧಾರ. ಇಂತಹ ಕಠಿಣ ಕ್ರಮಗಳನ್ನು ನಾವು ಸ್ವಾಗತಿಸಬೇಕಾಗಿದೆ. ಯಾಕೆಂದರೆ ಕಳೆದ ಹಲವಾರು ವರ್ಷಗಳಿಂದ ಎಸೆಸೆಲ್ಸಿ ಫಲಿತಾಂಶ ಪ್ರಕಟದ ವೇಳೆ ಅಚ್ಚರಿ ಫಲಿತಾಂಶ ಕೂಡಾ ಪ್ರಕಟಗೊಂಡಿವೆ. ಉತ್ತೀರ್ಣರಾಗುವ ಅರ್ಹತೆ ಇದ್ದವರೂ ಅನುತ್ತೀರ್ಣರಾದ ಘಟನೆಯೂ ನಡೆದಿತ್ತು. ಕೆಲವು ವಿದ್ಯಾರ್ಥಿಗಳು ಇದರಿಂದ ಬೇಸತ್ತು ಸಾವಿಗೆ ಶರಣರಾಗಿದ್ದರು. ಇನ್ನು ಕೆಲವರು ದೂರು ನೀಡಿದ್ದರು. ಇದಕ್ಕೆಲ್ಲಾ ಉತ್ತರಪತ್ರಿಕೆ ಮೌಲ್ಯಮಾಪಕರ ನಿರ್ಲಕ್ಷ, ಬೇಜವಾಬ್ದಾರಿ ಎಂಬ ಆರೋಪ ಕೇಳಿ ಬಂದಿತ್ತು. ಈ ವರ್ಷ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಆನ್‌ಲೈನ್‌ನಲ್ಲಿ ಅಂಕಗಳನ್ನು ನಮೂದಿಸುವ ಪದ್ಧತಿಯನ್ನು ಪರಿಚಯಿಸಿತ್ತು. ಈ ವೇಳೆ ಮೌಲ್ಯಮಾಪಕರು ಅಂಕಗಳನ್ನು ನಮೂದಿಸುವ ಬದಲು ಒಎಂಆರ್ ಪತ್ರಿಕೆಯ ಪುಟಗಳ ಸಂಖ್ಯೆ ನಮೂದಿಸಿದ್ದರಿಂದ ಫಲಿತಾಂಶ ವ್ಯತಿರಿಕ್ತವಾಗಿ ಪ್ರಕಟಗೊಂಡಿತ್ತು. ಹೀಗಾಗಿ ಮೌಲ್ಯಮಾಪನದ ವೇಳೆ ತಪ್ಪುಎಸಗಿದ ಮೌಲ್ಯಮಾಪಕರಿಗೆ ಹಂತ-ಹಂತವಾಗಿ ಶಿಕ್ಷೆ ನೀಡಲು ಮಂಡಳಿ ತೀರ್ಮಾನಿಸಿದೆ.

ಈ ನಿಯಮ ಪಿಯುಸಿ ಪರೀಕ್ಷೆಯ ಮೌಲ್ಯಮಾಪನಕ್ಕೂ ಅನ್ವಯವಾಗಲಿ. ಜೊತೆಗೆ ಹೊಸ ತಂತ್ರಜ್ಞಾನದ ಅರಿವು ಇಲ್ಲದ ಮೌಲ್ಯಮಾಪಕರಿಗೂ ಇನ್ನಷ್ಟು ತರಬೇತಿ ನೀಡಿ ಫಲಿತಾಂಶದಲ್ಲಿ ಪೂರ್ಣ, ನಿಖರತೆಯನ್ನು ಕಾಪಾಡಬೇಕಾಗಿದೆ. 

Writer - -ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - -ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News