ರೋಹಿತ್- ವಿರಾಟ್ ಕೊಹ್ಲಿ ಶೀತಲ ಸಮರಕ್ಕೆ ಕಾರಣವಾಯಿತು ಸಾಮಾಜಿಕ ಜಾಲತಾಣ!

Update: 2019-07-27 05:35 GMT

ಹೊಸದಿಲ್ಲಿ, ಜು.27: ರೋಹಿತ್ ಶರ್ಮಾ ಅವರು ವಿರಾಟ್ ಕೊಹ್ಲಿ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾರ ಇನ್‌ಸ್ಟಾಗ್ರಾಮ್ ಖಾತೆಯನ್ನು ಫಾಲೋ ಮಾಡುವುದನ್ನು ನಿಲ್ಲಿಸಿದ ಬಳಿಕ ನಾಯಕ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಮಧ್ಯೆ ಭಿನ್ನಾಭಿಪ್ರಾಯ ತಲೆ ಎತ್ತಿದೆ ಎನ್ನಲಾಗಿದೆ. ಸೂಪರ್‌ಸ್ಟಾರ್‌ಗಳ ಅಹಂ ಹಾಗೂ ದ್ವೇಷದ ಜ್ವಾಲೆಯಿಂದಾಗಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿಯಿಲ್ಲದಂತಾಗಿದೆ.

ರೋಹಿತ್ ಈ ಹಿಂದೆಯೂ ವಿರಾಟ್ ಫಾಲೋವರ್ಸ್ ಆಗಿರಲಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊವನ್ನು ಹಾಕಿದ್ದ ಅನುಷ್ಕಾ, ‘‘ಒಬ್ಬ ಬುದ್ದಿವಂತ ಒಮ್ಮೆ ಏನನ್ನೂ ಹೇಳಲಿಲ್ಲ. ಸುಳ್ಳು ಗೋಚರಿಸುವಿಕೆಯ ಅವ್ಯವಸ್ಥೆಯಲ್ಲಿ ಸತ್ಯದಿಂದ ಮಾತ್ರ ವೌನದಿಂದ ಕೈಕುಲಕಬಹುದು’’ ಎಂದು ಸಂದೇಶ ಕಳುಹಿಸಿದ್ದರು.

 ಕೊಹ್ಲಿ ಈಗಲೂ ರೋಹಿತ್‌ರನ್ನು ಫಾಲೋ ಮಾಡುತ್ತಾರೆ. ಆದರೆ, ಅವರು ರೋಹಿತ್ ಪತ್ನಿ ರಿತಿಕಾ ಸಜ್‌ದೇವ್‌ರನ್ನು ಫಾಲೋ ಮಾಡುತ್ತಿಲ್ಲ. ಅನುಷ್ಕಾ ಇಬ್ಬರನ್ನೂ ಫಾಲೋ ಮಾಡುವುದನ್ನು ನಿಲ್ಲಿಸಿದ್ದರು. ರಿತಿಕಾ ಅವರು ನಾಯಕ ಕೊಹ್ಲಿ ಅಥವಾ ಅನುಷ್ಕಾರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿಲ್ಲ.

ಸಾಮಾಜಿಕ ಜಾಲತಾಣದ ಮೂಲಕ ಇಬ್ಬರು ಸ್ಟಾರ್ ಆಟಗಾರರು ಶೀತಲ ಸಮರದಲ್ಲಿ ತೊಡಗಿರುವ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿದ್ದ ಆಡಳಿತಾಧಿಕಾರಿಗಳ ಸಮಿತಿ ಮುಖ್ಯಸ್ಥ ವಿನೋದ್ ರಾಯ್, ‘‘ಈ ಕಥೆಯನ್ನು ಮಾಧ್ಯಮಗಳೇ ಸೃಷ್ಟಿ ಮಾಡಿವೆ’’ ಎಂದಿದ್ದರು.

ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ದ ಸೋತ ಬಳಿಕ ಕೊಹ್ಲಿ ಹಾಗೂ ರೋಹಿತ್ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ತಂಡದಲ್ಲಿ ಎರಡು ಬಣ ಸೃಷ್ಟಿಯಾಗಿದೆ ಎಂಬ ಊಹಾಪೋಹ ಕೇಳಿಬಂದಿತ್ತು. ಕೆಲವು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಅವರಿದ್ದ ಮ್ಯಾನೇಜ್‌ಮೆಂಟ್ ಕಂಪೆನಿಯಿಂದ ರೋಹಿತ್ ಹಾಗೂ ಶಿಖರ್ ಧವನ್ ಹೊರ ಬಂದಿದ್ದರು. ಇದು ಇವರೆಲ್ಲರ ನಡುವಿನ ಶೀತಲ ಸಮರಕ್ಕೆ ನಾಂದಿ ಹಾಡಿದೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News