ಇಬ್ಬರು ಅತೃಪ್ತ ಶಾಸಕರು ಸಿದ್ದರಾಮಯ್ಯರನ್ನು ಸಂಪರ್ಕಿಸಿದ್ದರು: ಎಂ.ಬಿ.ಪಾಟೀಲ್

Update: 2019-07-27 12:34 GMT

ವಿಜಯಪುರ, ಜು. 27: ‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತರಿಬ್ಬರು ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಸಂಪರ್ಕಿಸಿದ್ದರು. ಆದರೆ, ಸಿದ್ದರಾಮಯ್ಯ ಅವರು ಕರೆಯನ್ನು ಸ್ವೀಕರಿಸಿಲ್ಲ’ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷಾಂತರ ನಿಷೇಧ ಕಾಯಿದೆಗೆ ತಿದ್ದುಪಡಿ ಆಗಬೇಕಿದೆ. ಈ ಕಾಯ್ದೆಯ 10ನೆ ಶೆಡ್ಯೂಲ್‌ಗೆ ತಿದ್ದುಪಡಿ ಆಗಬೇಕಿದೆ. ಅನರ್ಹ ಶಾಸಕರ ಕುರಿತು ಸ್ಪೀಕರ್ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಬೇಕು ಎಂದರು.

ಯಡಿಯೂರಪ್ಪ ರಾಜಕೀಯ ಜೀವನದ ಕಟ್ಟ ಕಡೆಯ ಹಂತದಲ್ಲಿದ್ದು, ಅಧಿಕಾರದ ದುರಾಸೆಯಿಂದ ಸಿಎಂ ಆಗಿದ್ದಾರೆ. ಅವರ ಪಕ್ಷದಲ್ಲಿರುವ ವಯಸ್ಸಿನ ಪರಿಮಿತಿಯಿಂದ ತರಾತುರಿಯಲ್ಲಿ ಸಿಎಂ ಆಗಿದ್ದಾರೆ. ಇಲ್ಲದಿದ್ದರೆ, ಅವರೂ ಬಿಜೆಪಿ ಮಾರ್ಗದರ್ಶನ ಸಮಿತಿ ಸೇರಬಹುದೆಂಬ ಆತಂಕದಲ್ಲಿದ್ದರು ಎಂದು ಟೀಕಿಸಿದರು.

ಬಿಜೆಪಿ ನೇತೃತ್ವದ ಸರಕಾರದ ಬಹುಮತವೇ ಇಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರಿಗೆ ಯಡಿಯೂರಪ್ಪನವರಿಗೆ ಸರಕಾರ ರಚನೆ ಮಾಡಲು ಅವಕಾಶ ನೀಡಿದ್ದು, ಈ ಸರಕಾರವೇ ಅನೈತಿಕವಾಗಿದೆ ಎಂದು ಎಂ.ಬಿ.ಪಾಟೀಲ್ ಇದೇ ವೇಳೆ ಲೇವಡಿ ಮಾಡಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತರಿಗೆ ಝೀರೋ ಟ್ರಾಫಿಕ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಗೃಹ ಸಚಿವನಾಗಿದ್ದ ನಾನೇ ಝೀರೋ ಟ್ರಾಫಿಕ್ ಬಳಸಲಿಲ್ಲ. ಇನ್ನು ಅತೃಪ್ತ ಶಾಸಕರಿಗೆ ಝೀರೋ ಟ್ರಾಫಿಕ್ ನೀಡಲು ಸಾಧ್ಯವೇ ಇಲ್ಲ ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News