8ನೆ ದಕ್ಷಿಣ ಭಾರತದ ಎನ್‌ಜಿಒಗಳ ಸಮಾವೇಶ: ಸರಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸಿ- ಎ.ಬಿ.ಇಬ್ರಾಹಿಂ
ಬೆಂಗಳೂರು, ಜು.27: ಸರಕಾರಗಳು ಜಾರಿಗೆ ತರುವ ಯೋಜನೆಗಳನ್ನು ಎನ್‌ಜಿಒ ಪ್ರತಿನಿಧಿಗಳು ಸಾರ್ವಜನಿಕರಿಗೆ ಮುಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ ನುಡಿದರು.
ಶನಿವಾರ ಎಂ.ಜಿ.ರಸ್ತೆಯ ನಗರದ ಖಾಸಗಿ ಹೊಟೇಲ್‌ನಲ್ಲಿ ಸಿಗ್ಮಾ ಫೌಂಡೇಶನ್ ಮತ್ತು ಲೀಡ್ ಟ್ರಸ್ಟ್ ಹಮ್ಮಿಕೊಂಡಿರುವ ಎರಡು ದಿನಗಳ ಕಾಲ 8ನೆ ದಕ್ಷಿಣ ಭಾರತದ ಎನ್‌ಜಿಒ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ, ಮೂಲಸೌಕರ್ಯ, ಹಣಕಾಸು ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಆಡಳಿತ ನಡೆಸುವ ಸರಕಾರಗಳು ಜಾರಿಗೆ ತಂದಿವೆ. ಆದರೆ, ಸೂಕ್ತ ರೀತಿಯಲ್ಲಿ ಸಂಪರ್ಕ-ಸಂವಹನ ಇಲ್ಲದ ಕಾರಣ, ಕೆಲ ಯೋಜನೆಗಳು ಜನರಿಗೆ ಮುಟ್ಟುವುದಿಲ್ಲ. ಆದರೆ, ಸ್ವಯಂ ಸೇವಾ ಸಂಸ್ಥೆಗಳು(ಎನ್‌ಜಿಒ) ಪ್ರಮುಖ ಪಾತ್ರವಹಿಸಿ, ಇಂತಹ ಯೋಜನೆಗಳ ಯಶಸ್ವಿಗೆ ಮುಂದಾಗಬಹುದೆಂದು ಅವರು ತಿಳಿಸಿದರು.
ಸಾಮಾಜಿಕ ಅಭಿವೃದ್ದಿಗೆ ಸ್ವಯಂ ಸೇವಾ ಸಂಸ್ಥೆಗಳು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಆರೋಗ್ಯ, ಶಿಕ್ಷಣ, ಮತ್ತು ಸಾಮಾಜಿಕ ಕಳಕಳಿಗೆ ತಮ್ಮದೇ ಆದ ಕೊಡುಗೆಯನ್ನು ಹತ್ತು ಹಲವು ಸಂಸ್ಥೆಗಳು ನೀಡುತ್ತಾ ಬಂದಿವೆ. ಈ ನಿಟ್ಟಿನಲ್ಲಿ ಇವರ ಕಾರ್ಯ ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಶಸ್ತಿ ಪ್ರದಾನ: ಪ್ರಸ್ತುತ ಸಾಲಿನ ಸೋಷಿಯಲ್ ಹೀರೋ ಪ್ರಶಸ್ತಿ ಅನ್ನು ಮೈಸೂರಿನ ಆಯ್ಯುಬ್ ಅಹ್ಮದ್, ಲಖ್ನೋ ಶಿಕ್ಷಣ ಹಕ್ಕು ಸಂಸ್ಥೆಯ ಸಮೀನಾ ಬಾನು, ಕೇರಳ ಸಾಮಾಜಿಕ ಕಾರ್ಯಕರ್ತೆ ಸಿಫೀಯಾ ಹನೀಫ್ ಅವರಿಗೆ ಪ್ರದಾನಿಸಲಾಯಿತು.
ಅದೇ ರೀತಿ, ಯುವ ಸಾಮಾಜಿಕ ಹೀರೋ ಪ್ರಶಸ್ತಿ ಅನ್ನು ಕೋಲ್ಕತಾ ಯುಟ್ಯುಬರ್ ಸಂಸ್ಥಾಪಕ ವಲಿ ರೆಹಮಾನಿ ಅವರಿಗೆ ಪ್ರದಾನಿಸಲಾಯಿತು. ಜೀವಮಾನ ಸಾಧನೆ ಪ್ರಶಸ್ತಿಗೆ ಮುಕ್ಕಮ್ ಮುಸ್ಲಿಂ ಅನಾಥಾಶ್ರಮ ಮಾಜಿ ದಿವಂಗತ ಮುಹಮ್ಮದ್ ಮೊನ್ ಹಾಝೀ ಅವರನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಿಲ್ವರ್‌ಲೈನ್ ಗ್ರೂಪ್ ಅಧ್ಯಕ್ಷ ಮುಹಮ್ಮದ್ ಫಾರೂಕ್, ಬಾಜ್-ಎ-ನಿಸ್ವಾನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಹುಸ್ನಾ ಶರೀಫ್, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ವಿವಿಯ ಕುಲಪತಿ ನಿಸ್ಸಾರ್ ಅಹ್ಮದ್, ಸಿಗ್ಮಾ ಫೌಂಡೇಶನ್ ಅಧ್ಯಕ್ಷ ಅಮೀನ್ ಮುದಸ್ಸರ್, ಎಂಐಎ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಝ್, ಲೀಡ್ ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ.ಅಶ್ರಫ್ ಅಲಿ ಸೇರಿ ಪ್ರಮುಖರಿದ್ದರು.