×
Ad

ಪಿಒಪಿ ಗಣೇಶ, ಡೆಂಗ್ ಕುರಿತು ಅರಿವು ಮೂಡಿಸಲು ಧ್ವನಿವರ್ಧಕದ ಮೊರೆ ಹೋದ ಬಿಬಿಎಂಪಿ

Update: 2019-07-27 18:50 IST

ಬೆಂಗಳೂರು, ಜು.27: ಚುನಾವಣೆ ಸಂದರ್ಭದಲ್ಲಿ ಧ್ವನಿವರ್ಧಕ ಮೂಲಕ ಪ್ರಚಾರ ಮಾಡುವುದನ್ನು ಕೇಳಿದ್ದೀರಿ, ಆದರೀಗ ಕಸ ವಿಂಗಡಣೆ, ಪ್ಲಾಸ್ಟಿಕ್ ನಿಷೇಧ, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ), ಡೆಂಗ್ ಕುರಿತು ಅರಿವು ಮೂಡಿಸಲು ಪಾಲಿಕೆ ಮೈಕ್‌ಗಳ ಮೊರೆ ಹೋಗುತ್ತಿದೆ.

ಬಿಬಿಎಂಪಿಯು ಸಾರ್ವಜನಿಕರಲ್ಲಿ ಕಸ ವಿಂಗಡಣೆ ಸಂಬಂಧಿಸಿದಂತೆ ಜಾಹೀರಾತು, ಡಸ್ಟ್‌ಬಿನ್ ನೀಡುವುದು, ಸುದ್ದಿಗೋಷ್ಠಿ, ಶಾಲಾ ಮಕ್ಕಳಿಂದ ಜಾಥಾ ಸೇರಿದಂತೆ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಿದರೂ, ಜನರಿಗೆ ಅರಿವಾಗಿಲ್ಲ. ಹಾಗಾಗಿ ಬಿಬಿಎಂಪಿ ಈಗ ಮತ್ತೊಂದು ಸಾಹಸಕ್ಕೆ ಕೈಹಾಕಿದೆ.

ಮುಂದಿನ ತಿಂಗಳು ಗಣೇಶ ಚತುರ್ಥಿ ಬರಲಿದ್ದು, ನಗರದಲ್ಲಿ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯಿಂದ ಜಲಮಾಲಿನ್ಯದಿಂದ ಆಗುವ ಹಾನಿ, ಕಸ ವಿಂಗಡಣೆ ಮಾಡದಿರುವುದರಿಂದಾಗುವ ಸಮಸ್ಯೆ, ಮಳೆಗಾಲ ಆರಂಭವಾಗಿದ್ದು ತಗ್ಗು ಪ್ರದೇಶದಲ್ಲಿ ನೀರು ನಿಲ್ಲುವುದರಿಂದಾಗಿ ಸೊಳ್ಳೆ ಉತ್ಪತ್ತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಆಟೋಗಳಲ್ಲಿ ಧ್ವನಿವರ್ಧಕ ಅಳವಡಿಸಿ ಪ್ರಚಾರ ಮಾಡಲಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ 8 ವಲಯಗಳಿದ್ದು, ಅತಿ ಹೆಚ್ಚು ಮಿಶ್ರ ಕಸ ಎಲ್ಲಿ ಉತ್ಪತ್ತಿಯಾಗುತ್ತದೆಯೋ ಆ ವಲಯಗಳಲ್ಲಿ ಆಟೋ ಮೂಲಕ ಪ್ರಚಾರ ನಡೆಯಲಿದೆ. ಹಾಗೆಯೇ ಅತಿ ಹೆಚ್ಚು ಕಸ ಉತ್ಪತ್ತಿಯಾಗುವ ವಾರ್ಡ್‌ಗಳಲ್ಲಿಯೂ ಬಿರುಸಿನ ಪ್ರಚಾರ ಕೈಗೊಳ್ಳಲು ಪಾಲಿಕೆ ಮುಂದಾಗಿದೆ.

ಎಲ್ಲೆಲ್ಲಿ ಜಾಗೃತಿ

ವಿಜಯನಗರ, ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ, ಹೆಬ್ಬಾಳ, ರಾಜರಾಜೇಶ್ವರಿ ನಗರ, ಸರ್ವಜ್ಞ ನಗರ, ಕೆ.ಆರ್.ಪುರ, ಪುಲಿಕೇಶಿನಗರ, ಮಲ್ಲೇಶ್ವರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಸಿ.ವಿ.ರಾಮನ್, ಶಿವಾಜಿನಗರ, ಗಾಂಧಿನಗರ, ಶಾಂತಿನಗರ, ಚಿಕ್ಕಪೇಟೆ, ರಾಜಾಜಿನಗರ, ಗೋವಿಂದರಾಜನಗರ, ಚಾಮರಾಜಪೇಟೆ, ಬಿಟಿಎಂ ಲೇಔಟ್, ಮಹದೇವಪುರ, ಬಸವನಗುಡಿ, ಪದ್ಮನಾಭನಗರ, ಜಯನಗರ, ಬೊಮ್ಮನಹಳ್ಳಿ ಸೇರಿ ಎಲ್ಲ 28 ವಿಧಾನಸಭೆ ಕ್ಷೇತ್ರದಲ್ಲಿ ತಲಾ ಒಂದೊಂದು ಆಟೋದಲ್ಲಿ ಆಡಿಯೋ ಮೂಲಕ ಪಾಲಿಕೆ ಜಾಗೃತಿ ಮೂಡಿಸಲಿದೆ.

ಪ್ರತಿ ವಾರ್ಡ್‌ಗಳಿಗೆ ಸಂಚರಿಸುವ ಆಟೋ ಟಿಪ್ಪರ್‌ಗಳಲ್ಲಿಯೂ ಧ್ವನಿವರ್ಧಕ ಅಳವಡಿಸಲಾಗಿದ್ದು, ಕಸ ವಿಂಗಡಣೆ ಸಂಬಂಧಿಸಿದ ಬಗ್ಗೆ ಮಾತ್ರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಕಸದಿಂದ ಗೊಬ್ಬರ ತಯಾರಿ ಹೇಗೆ? ಹಸಿ-ಒಣ ಕಸ ವಿಂಗಡಣೆ ಸೇರಿ ಕಸದ ಬಗ್ಗೆ ಪ್ರಚಾರ ಮಾಡಲಾಗುವುದು.

-ಗಂಗಾಂಬಿಕೆ, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News