ಜೆಡಿಎಸ್ ಕಾರ್ಯಕರ್ತರನ್ನು ಕಡೆಗಣಿಸಿದ್ದು ಮಹಾಪರಾಧ: ಕಣ್ಣೀರಿಟ್ಟ ದೇವೇಗೌಡ

Update: 2019-07-28 10:38 GMT

ಬೆಂಗಳೂರು, ಜು. 28: ಜೆಡಿಎಸ್ ಕೈಯಲ್ಲಿ ಒಂದು ವರ್ಷ ಎರಡು ತಿಂಗಳು ಅಧಿಕಾರವಿದ್ದರೂ ನಮ್ಮ ಕಾರ್ಯಕರ್ತರಿಗೆ ಸೂಕ್ತ ಅಧಿಕಾರ ಕೊಡದೇ ಹೋಗಿದ್ದು ಮಹಾಪರಾಧವೆಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕಣ್ಣೀರಿಟ್ಟರು.

ರವಿವಾರ ಯಶವಂತಪುರ ಮತ್ತು ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಧಿಕಾರವಧಿಯಲ್ಲಿ ಜೆಡಿಎಸ್‌ಗಾಗಿ ಹಗಲಿರುಳು ಶ್ರಮಿಸಿದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸದೇ ಇದ್ದದ್ದು ನಾವು ಮಾಡಿದ ದೊಡ್ಡ ತಪ್ಪಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಜೆಡಿಎಸ್ ಕಾರ್ಯಕರ್ತರಿಗೆ ನಿಗಮ ಮತ್ತು ಮಂಡಳಿಗೆ ನೇಮಕ ಮಾಡಿ ಅಧಿಕಾರ ಕೊಡಲಿಲ್ಲ. ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ಇದೇ ತಪ್ಪು ಮಾಡಿದರು. ಕೆಲವರಿಗಷ್ಟೇ ಅಧಿಕಾರ ದಕ್ಕಿತು. ಈ ತಪ್ಪನ್ನು ನಾನು ಒಪ್ಪಿಕೊಳ್ಳುವುದಾಗಿ ಅವರು ಹೇಳಿದರು.

ಜೆಡಿಎಸ್ ಕಾರ್ಯಕರ್ತರನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ಏನೆಲ್ಲ ಸಮಸ್ಯೆಯಾಗಿದೆ ಎಂದು ಮನವರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ತಪ್ಪು ಮರು ಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು. ಮಹಾಲಕ್ಷ್ಮಿ ಲೇಔಟ್‌ನ ಜೆಡಿಎಸ್ ಶಾಸಕ ಗೋಪಾಲಯ್ಯ ಅನರ್ಹಗೊಂಡಿದ್ದು, ಅಲ್ಲಿ ಪರ್ಯಾಯ ನಾಯಕತ್ವವನ್ನು ಬೆಳೆಸಬೇಕಾಗಿದೆ. ಎಲ್ಲರೂ ಒಟ್ಟಾಗಿ ಶ್ರಮಿಸುವ ಮೂಲಕ ಜೆಡಿಎಸ್‌ನ್ನು ಪುನರ್ ಸಂಘಟಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಜೆಡಿಎಸ್ ನಾಯಕ ಕುಪೇಂದ್ರ ರೆಡ್ಡಿ ಮಾತನಾಡಿ, ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಅಧಿಕಾರದ ಸ್ವಾರ್ಥವಾಗಿ ಚಿಂತಿಸಿದರು. ಕಾಂಗ್ರೆಸ್ ಅತೃಪ್ತ ಶಾಸಕರ ಬಗ್ಗೆ ಎಚ್ಚರಿಕೆ ವಹಿಸದಿದದ್ದೆ ಮೈತ್ರಿ ಸರಕಾರದ ಪತನಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.

ಅತೃಪ್ತ ಶಾಸಕರನ್ನು ಅನರ್ಹಗೊಳಿಸಿರುವ ವಿಧಾನ ಸಭಾಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್ ತೀರ್ಪು ಐತಿಹಾಸಿಕವಾದದ್ದು, ದೇಶದಲ್ಲಿ ಹಲವು ತೀರ್ಪುಗಳು ಹೊರಬಿದ್ದಿದ್ದರೂ ಅವುಗಳ ಪೈಕಿ ಇದು ವಿಶೇಷ ಎನಿಸಿಕೊಳ್ಳಲಿದೆ.

- ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News